
ಗದಗ, 30 ಮೇ (ಹಿ.ಸ.) :
ಆ್ಯಂಕರ್ : ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ, ಅರ್ಥಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಕಂಪ್ಯೂಟರ್ ಸೈನ್ಸ್ ಸೇರಿದಂತೆ ಮೂಲಭೂತ ವಿಷಯಗಳ ಕೋರ್ಸುಗಳನ್ನು ಬೇಡಿಕೆಯಿಲ್ಲ ಎಂಬ ನೆಪವೊಡ್ಡಿ ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮವನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಐಡಿಎಸ್ಓ ಜಿಲ್ಲಾ ಸಂಚಾಲಕಿ ಎಂ. ಶಾಂತಿ, ಕಾಲೇಜು ಶಿಕ್ಷಣ ಇಲಾಖೆ ಮೇ 21, 2026ರಂದು ಒಟ್ಟು 458 ಕೋರ್ಸುಗಳನ್ನು ರದ್ದುಪಡಿಸುವ ಆದೇಶ ಹೊರಡಿಸಿರುವುದು ಶಿಕ್ಷಣ ಕ್ಷೇತ್ರಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದ್ದಾರೆ.
ವಿವಿಧ ಕೋರ್ಸುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕುಸಿಯಲು ಉದ್ಯೋಗಾವಕಾಶಗಳ ಕೊರತೆಯೇ ಪ್ರಮುಖ ಕಾರಣವಾಗಿದೆ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಸಾವಿರಾರು ಹುದ್ದೆಗಳು ವರ್ಷಗಳಿಂದ ಖಾಲಿ ಉಳಿದಿವೆ. ಶಿಕ್ಷಣ ಇಲಾಖೆಯಲ್ಲೇ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಮೊದಲು ಅವುಗಳನ್ನು ಭರ್ತಿ ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ದಾಖಲಾತಿ ಕಡಿಮೆಯಾಗಿದೆ ಎಂಬ ಕಾರಣ ನೀಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಕೋರ್ಸುಗಳನ್ನೇ ರದ್ದುಪಡಿಸುವ ಮೂಲಕ ಶಿಕ್ಷಣದ ಅಡಿಪಾಯವನ್ನೇ ದುರ್ಬಲಗೊಳಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಕುರಿತು ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಅಪ್ರಜಾತಾಂತ್ರಿಕ ನಡೆ ಎಂದು ಟೀಕಿಸಲಾಗಿದೆ.
“ಮೂಲ ವಿಷಯಗಳ ಕೋರ್ಸುಗಳನ್ನು ರದ್ದುಪಡಿಸುವುದು ಶಿಕ್ಷಣದ ಅಡಿಪಾಯಕ್ಕೆ ಕೊಡಲಿ ಪೆಟ್ಟು ಹಾಕಿದಂತಾಗಿದೆ” ಎಂದು ಎಐಡಿಎಸ್ಓ ಜಿಲ್ಲಾ ಸಂಚಾಲಕಿ ಎಂ. ಶಾಂತಿ ಅಭಿಪ್ರಾಯಪಟ್ಟಿದ್ದಾರೆ.
ಮಾರುಕಟ್ಟೆ ಬೇಡಿಕೆಯ ಹೆಸರಿನಲ್ಲಿ ಅನುದಾನರಹಿತ ಕೋರ್ಸುಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿರುವ ಎಐಡಿಎಸ್ಓ, ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆದು ಮೂಲ ವಿಷಯಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / lalita MP