
ವಿಜಯಪುರ, 29 ಮೇ (ಹಿ.ಸ.) :
ಆ್ಯಂಕರ್ : ಭೀಮಾತೀರ ಪ್ರದೇಶದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಆಸ್ತಿ ವಿವಾದದ ಹಿನ್ನೆಲೆ ಆರು ಮಂದಿಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.
ಕುಟುಂಬಗಳ ನಡುವಿನ ದೀರ್ಘಕಾಲದ ಜಮೀನು ಕಲಹ ರಕ್ತಪಾತಕ್ಕೆ ತಿರುಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹತ್ಯೆಗೀಡಾದವರನ್ನು ಚಂದು ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ ಹಾಗೂ ಶಬ್ಬೀರ್ ನದಾಫ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮೊದಲು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬಳಿಕ ಗುಂಡು ಹಾರಿಸಿ ಹತ್ಯೆ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ, ಜಮೀನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ ನಿರಾಳೆ ಕುಟುಂಬಗಳ ಮಧ್ಯೆ ಹಲವು ದಿನಗಳಿಂದ ವೈಷಮ್ಯ ಮುಂದುವರಿದಿತ್ತು. ಈ ಕುರಿತು ಕೆಲ ದಿನಗಳ ಹಿಂದಷ್ಟೇ ನ್ಯಾಯ ಪಂಚಾಯತಿ ಕೂಡ ನಡೆದಿತ್ತು ಎನ್ನಲಾಗಿದೆ. ಆದರೆ ವಿವಾದ ಬಗೆಹರಿಯದೆ ಮತ್ತೆ ಗಂಭೀರ ಸ್ವರೂಪ ಪಡೆದಿದೆ.
ನಿರಾಳೆ ಕುಟುಂಬವು ಸುಮಾರು ಆರು ತಿಂಗಳ ಹಿಂದೆ ಗೋವಿಂದಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ 24 ಎಕರೆ ವಿವಾದಿತ ಜಮೀನನ್ನು ಖರೀದಿಸಿತ್ತು. ಈ ಜಮೀನನ್ನು ಖರೀದಿಸಬಾರದು ಎಂದು ಗ್ರಾಮದಲ್ಲಿನ ಕೆಲವರು ಹಾಗೂ ಇದೀಗ ಆರೋಪಿಗಳೆಂದು ಹೇಳಲಾಗುತ್ತಿರುವವರು ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ ನಿರಾಳೆ ಕುಟುಂಬ ಜಮೀನು ಖರೀದಿ ಮಾಡಿತ್ತು.
ಇಂದು ಟ್ರ್ಯಾಕ್ಟರ್ ಹಾಗೂ ಜೆಸಿಬಿ ಮೂಲಕ ಜಮೀನನ್ನು ಸ್ವಚ್ಛಗೊಳಿಸಿ ಕೃಷಿಗೆ ಸಜ್ಜುಗೊಳಿಸುತ್ತಿದ್ದ ವೇಳೆ 15 ರಿಂದ 20 ಜನರ ಗುಂಪು ಏಕಾಏಕಿ ದಾಳಿ ನಡೆಸಿ, ಹೊಲದಲ್ಲೇ ಕುಟುಂಬ ಸದಸ್ಯರನ್ನು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಹತ್ಯೆಯ ನಿಖರ ಕಾರಣ, ದಾಳಿಯಲ್ಲಿ ಭಾಗಿಯಾದವರ ಸಂಖ್ಯೆ ಹಾಗೂ ಸಂಚಿನ ಹಿಂದೆ ಇರುವ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರೆದಿದ್ದು, ಘಟನೆ ಕುರಿತು ನಂತರ ಮಾಹಿತಿ ನೀಡುವುದಾಗಿ ಎಸ್.ಪಿ.ಲಕ್ಷ್ಮಣ ನಿಂಬರಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.