ಆರೋಗ್ಯಕ್ಕೆ ಅಮೂಲ್ಯ ಖಜಾನೆ ಮೂಲಂಗಿ
ಬೆಂಗಳೂರು, 25 ಮೇ (ಹಿ.ಸ.) : ಆ್ಯಂಕರ್ : ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೂಲಂಗಿ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಉಪಯುಕ್ತ ತರಕಾರಿಗಳಲ್ಲೊಂದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಕಡಿಮೆ ಬೆಲೆಗೆ ಸುಲಭವಾಗಿ ಸಿಗುವ ಈ ತರಕಾರಿಯಲ್ಲಿ ವಿಟಮಿನ್ ಸಿ, ನಾರಿನಂಶ, ಪೊಟ್ಯಾಷಿಯಂ, ಕ್ಯಾಲ್ಸ
Radish


ಬೆಂಗಳೂರು, 25 ಮೇ (ಹಿ.ಸ.) :

ಆ್ಯಂಕರ್ : ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೂಲಂಗಿ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಉಪಯುಕ್ತ ತರಕಾರಿಗಳಲ್ಲೊಂದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಕಡಿಮೆ ಬೆಲೆಗೆ ಸುಲಭವಾಗಿ ಸಿಗುವ ಈ ತರಕಾರಿಯಲ್ಲಿ ವಿಟಮಿನ್ ಸಿ, ನಾರಿನಂಶ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಸೇರಿದಂತೆ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ.

ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿಯೂ ಮೂಲಂಗಿಗೆ ವಿಶೇಷ ಸ್ಥಾನಮಾನವಿದೆ. ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಿಡಿದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವವರೆಗೂ ಹಲವು ರೀತಿಯಲ್ಲಿ ಇದು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ:

ಮೂಲಂಗಿಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತದೆ. ಹೊಟ್ಟೆ ಸ್ವಚ್ಛವಾಗಿರಲು ಸಹಾಯ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ದೇಹ ಹಗುರವಾಗಿರಲು ಕಾರಣವಾಗುತ್ತದೆ. ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರದ ತೊಂದರೆ ಇರುವವರಿಗೆ ಮಿತವಾಗಿ ಸೇವಿಸಿದರೆ ಉಪಕಾರಿಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ತೂಕ ಇಳಿಕೆಗೆ ನೆರವು:

ಕಡಿಮೆ ಕ್ಯಾಲೊರಿ ಹಾಗೂ ಹೆಚ್ಚು ನೀರಿನಾಂಶ ಹೊಂದಿರುವ ಮೂಲಂಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಉತ್ತಮ ಆಹಾರವಾಗಿದೆ. ಬೆಳಿಗ್ಗೆ ಅಥವಾ ಮಧ್ಯಾಹ್ನದ ಊಟದ ಜೊತೆಗೆ ಸಲಾಡ್ ರೂಪದಲ್ಲಿ ಸೇವಿಸಿದರೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಲಿವರ್ ಮತ್ತು ರಕ್ತ ಶುದ್ಧೀಕರಣ:

ಪ್ರಕೃತಿ ಚಿಕಿತ್ಸೆಯ ಪ್ರಕಾರ ಮೂಲಂಗಿ ದೇಹದ ಒಳಾಂಗಗಳ ಶುದ್ಧೀಕರಣಕ್ಕೆ ಸಹಕಾರಿ. ವಿಶೇಷವಾಗಿ ಲಿವರ್ ಆರೋಗ್ಯ ಕಾಪಾಡಲು ಮತ್ತು ರಕ್ತ ಶುದ್ಧೀಕರಣಕ್ಕೆ ಇದು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಅವಶ್ಯಕ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕೂದಲು, ಚರ್ಮ ಮತ್ತು ಕಣ್ಣಿನ ಆರೋಗ್ಯ:

ಮೂಲಂಗಿಯಲ್ಲಿರುವ ವಿಟಮಿನ್ ಸಿ ಮತ್ತು ಖನಿಜಾಂಶಗಳು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತವೆ. ದೇಹಕ್ಕೆ ತೇವಾಂಶ ಒದಗಿಸುವುದರಿಂದ ಚರ್ಮ ಒಣಗುವುದನ್ನು ತಡೆಯಬಹುದು. ಜೊತೆಗೆ ಕೂದಲು ಬೆಳವಣಿಗೆ ಮತ್ತು ಕಣ್ಣಿನ ಆರೋಗ್ಯಕ್ಕೂ ಇದು ಉಪಯುಕ್ತವೆಂದು ತಿಳಿದುಬಂದಿದೆ.

ಮೂಲಂಗಿ ತಿನ್ನುವ ಸರಿಯಾದ ವಿಧಾನವೇನು:

ಆರೋಗ್ಯ ತಜ್ಞರ ಪ್ರಕಾರ ಮೂಲಂಗಿಯನ್ನು ಖಾಲಿ ಹೊಟ್ಟೆಯಲ್ಲಿ ಹೆಚ್ಚಾಗಿ ಸೇವಿಸುವುದು ಸೂಕ್ತವಲ್ಲ. ಇದರಿಂದ ಕೆಲವರಿಗೆ ಆಸಿಡಿಟಿ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸಬಹುದು. ಆದ್ದರಿಂದ ಇದನ್ನು ಊಟದ ಜೊತೆಗೆ ಕೋಸಂಬರಿ ಅಥವಾ ಸಲಾಡ್ ರೂಪದಲ್ಲಿ ಸೇವಿಸುವುದು ಉತ್ತಮ.

ದಿನಕ್ಕೆ ಒಂದು ಮಧ್ಯಮ ಗಾತ್ರದ ಮೂಲಂಗಿ ಸೇವಿಸಿದರೆ ಸಾಕಷ್ಟು ಪೋಷಕಾಂಶ ಸಿಗುತ್ತದೆ. ಅತಿಯಾಗಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಮಿತಿಯಲ್ಲಿ ಸೇವನೆ ಮಾಡುವುದು ಒಳಿತು.

ವೈದ್ಯರ ಸಲಹೆ ಅಗತ್ಯ:

ಕಿಡ್ನಿ ಕಲ್ಲು, ಥೈರಾಯ್ಡ್ ಅಥವಾ ಹೊಟ್ಟೆ ಸಂಬಂಧಿತ ಗಂಭೀರ ಸಮಸ್ಯೆ ಇರುವವರು ಮೂಲಂಗಿಯನ್ನು ಔಷಧಿಯಂತೆ ಬಳಸುವುದಕ್ಕಿಂತ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕ ಆಹಾರ ಮುಖ್ಯ. ಅಂಥ ಆಹಾರಗಳ ಪಟ್ಟಿಯಲ್ಲಿ ಸರಳ ಮೂಲಂಗಿಗೂ ವಿಶೇಷ ಸ್ಥಾನವಿದೆ ಎನ್ನುವುದು ನಿಸ್ಸಂಶಯ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande