
ವಿಜಯಪುರ, 21 ಮೇ (ಹಿ.ಸ.) :
ಆ್ಯಂಕರ್ : ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ದುರ್ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗೌರೀಶ್ವರ ದೇವಸ್ಥಾನ ಸಮೀಪ ಸಂಭವಿಸಿದ ಅವಘಡದಲ್ಲಿ ಮಹಾದೇವಿ ವಾರದ (55) ಮೃತಪಟ್ಟಿದ್ದಾರೆ.
ಮೊನ್ನೆ ಸುರಿದ ಭಾರಿ ಮಳೆಯಿಂದ ಹಳೆಯ ಮನೆ ಸಂಪೂರ್ಣ ನೆನೆದು ದುರ್ಬಲಗೊಂಡಿತ್ತು ಎನ್ನಲಾಗಿದೆ. ನಸುಕಿನ ಜಾವ ಮನೆಯಲ್ಲಿ ಮಹಾದೇವಿ ಮಲಗಿದ್ದ ವೇಳೆ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇದೇ ವೇಳೆ ಮನೆಯ ಹೊರಭಾಗದಲ್ಲಿ ಪತಿ ಶಿವಾನಂದ ಮಲಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿದ ಕೂಡಲೇ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರೂ ಮಹಾದೇವಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ಸುದ್ದಿ ತಿಳಿದು ನಿಡಗುಂದಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.