ಸಿಲಿಕಾನ್ ಸಿಟಿ ಕ್ರೈಂ ಸಿಟಿಯತ್ತ : ಅಶೋಕ ಆರೋಪ
ಬೆಂಗಳೂರು, 21 ಮೇ (ಹಿ.ಸ.) : ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ರಾಜಧಾನಿಯ ಅಕ್ಕಪಕ
ಅಶೋಕ


ಬೆಂಗಳೂರು, 21 ಮೇ (ಹಿ.ಸ.) :

ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ರಾಜಧಾನಿಯ ಅಕ್ಕಪಕ್ಕದ ಜಿಲ್ಲೆಗಳಿಗೆ “ಬೆಂಗಳೂರು” ಹೆಸರು ಅಂಟಿಸಿ ರಿಯಲ್ ಎಸ್ಟೇಟ್ ದಂಧೆ ವಿಸ್ತರಿಸುವುದರಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ಆಸಕ್ತಿ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ. ಬೆಂಗಳೂರಿನ ಸುರಕ್ಷತೆ, ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಕಡೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ದೂರಿದ್ದಾರೆ.

“ಒಮ್ಮೆ ಸಿಲಿಕಾನ್ ಸಿಟಿಯಾಗಿ ಖ್ಯಾತಿ ಪಡೆದಿದ್ದ ಬೆಂಗಳೂರು ಇಂದು ಕ್ರೈಂ ಸಿಟಿಯಾಗಿ ಮಾರ್ಪಡುತ್ತಿದೆ. ಆವಿಷ್ಕಾರದ ರಾಜಧಾನಿ ಅಪರಾಧಗಳ ರಾಜಧಾನಿಯಾಗುತ್ತಿದೆ” ಎಂದು ಅಶೋಕ್ ಆರೋಪಿಸಿದ್ದಾರೆ.

ನಗರದಲ್ಲಿ ಅಪರಾಧ ಪ್ರಕರಣಗಳ ಏರಿಕೆಯನ್ನು ಉಲ್ಲೇಖಿಸಿರುವ ಅವರು, 2024ರಲ್ಲಿ 176 ಕೊಲೆ ಪ್ರಕರಣಗಳು ದಾಖಲಾಗಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 4,748ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ 16 ಗ್ಯಾಂಗ್ ರೇಪ್ ಪ್ರಕರಣಗಳೂ ಸೇರಿವೆ ಎಂದು ತಿಳಿಸಿದ್ದಾರೆ.

ಸೈಬರ್ ಅಪರಾಧಗಳ ಕುರಿತೂ ಆತಂಕ ವ್ಯಕ್ತಪಡಿಸಿರುವ ಅಶೋಕ್, ಒಂದೇ ವರ್ಷದಲ್ಲಿ 17,561 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ. ಡ್ರಗ್ಸ್ ದಂಧೆ ಹೆಚ್ಚಾಗಿದ್ದು, ₹98.69 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಹಿರಿಯ ನಾಗರಿಕರನ್ನು ಗುರಿಯಾಗಿಸಿ 671 ಪ್ರಕರಣಗಳು ದಾಖಲಾಗಿರುವುದಲ್ಲದೆ, ಅಪ್ರಾಪ್ತರ ಅಪರಾಧ ಪ್ರಕರಣಗಳಲ್ಲಿಯೂ ಏರಿಕೆ ಕಂಡುಬಂದಿದೆ ಎಂದು ಅವರು ಆರೋಪಿಸಿದ್ದಾರೆ. 2022ರಲ್ಲಿ 200 ಪ್ರಕರಣಗಳಿದ್ದರೆ, 2023ರಲ್ಲಿ 427ಕ್ಕೆ ಏರಿಕೆಯಾಗಿದ್ದು, 2024ರಲ್ಲಿ 386 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಟೀಕೆ ವ್ಯಕ್ತಪಡಿಸಿರುವ ಅಶೋಕ್, ಜನರ ಸುರಕ್ಷತೆಯಿಗಿಂತ ರಿಯಲ್ ಎಸ್ಟೇಟ್ ವಿಚಾರಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

“ಜನರ ಜೀವ ಮತ್ತು ಆಸ್ತಿ ರಕ್ಷಿಸಲು ವಿಫಲವಾದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ” ಎಂದು ಹೇಳಿರುವ ಅವರು, ಬೆಂಗಳೂರಿನ ಗೌರವ, ಸುರಕ್ಷತೆ ಮತ್ತು ಭವಿಷ್ಯಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ದೂರ ಮಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande