

ಯಲಬುರ್ಗಾ, 21 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಗೆದಿಗೇರಿ ಗ್ರಾಮ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ “ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ ಕಾರ್ಯಕ್ರಮ ಯಲಬುರ್ಗಾ ತಾಲೂಕಿನ ಹನುಮಾಪುರ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಆಫೀಸರ್ ಶಿವಲೀಲಾ ವನ್ನೂರು ಅವರು ಕಾರ್ಯಕ್ರಮದ ಕುರಿತು, ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಹಲವಾರು ಕಾನೂನು ಮತ್ತು ಯೋಜನೆಗಳನ್ನು ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿದ್ದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಸಂಪರ್ಕ ಸಂವಾದ ಸಭೆಗಳನ್ನು ಆಯೋಜಿಸಲಾಗುತ್ತಿದೆ.
ತಾಯಿ ಮತ್ತು ನವಜಾತ ಶಿಶು ಮರಣ ಪ್ರಕರಣಗಳು, ಮಕ್ಕಳನ್ನು ತೊರೆದು ಹೋದ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಈ ಸಮಸ್ಯೆಗೆ ಎಳವೆಯಲ್ಲಿ ಮಕ್ಕಳಿಗೆ ವಿವಾಹ ಮಾಡುವುದು ಒಂದು ಪ್ರಮುಖ ಕಾರಣವಾಗಿದೆ.
ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಚಿಕ್ಕ ಪ್ರಾಯದ ಮಗುವನ್ನು ಮದುವೆಯಾದ ಪುರುಷನಿಗೆ, ಬಾಲ್ಯ ವಿವಾಹ ಮಾಡಿದವರಿಗೆ, ಪ್ರೊತ್ಸಾಹಿಸಿದವರಿಗೆ ಹಾಗೂ ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರೆಲ್ಲರೆಗೂ ಈ ಕಾಯ್ದೆಯಡಿಯಲ್ಲಿ 2 ವರ್ಷ ಜೈಲು ಮತ್ತು ರೂ. 1 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಆದ್ದರಿಂದ ಮಕ್ಕಳ ಹಕ್ಕುಗಳನ್ನು ನೀವು ಗೌರವಿಸಿದಲ್ಲಿ, ಕಾನೂನು ನಿಮ್ಮನ್ನು ಗೌರವಿಸುತ್ತದೆಂದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಪ್ರತಿಭಾ ಕಾಶೀಮಠ ಅವರು ಭಾರತ ದೇಶವು ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ್ದು, ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಅವರಿಗೆ ಒದಗಿಸಲು ಕಟಿಬದ್ದವಾಗಿದೆ. ಅಲ್ಲದೇ ಮಕ್ಕಳಿಗೆ ಬದಕುವ ಹಕ್ಕು, ಅಭಿವೃದ್ಧಿ ಮತ್ತು ವಿಕಾಸಹೊಂದುವ ಹಕ್ಕು, ಶೋಷಣೆಯ ವಿರುದ್ಧ ಸಂರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೇ, ಈ ಹಕ್ಕುಗಳನ್ನು ಅವರಿಗೆ ತಲುಪಿಸಲು ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆಂದು ಕಾನೂನು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರನ್ವಯ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರಪಡಿಸಬಹುದಾಗಿದೆ. ನಂತರ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುತ್ತದೆಂದು ತಿಳಿಸಿದರು.
ಗೆದಿಗೇರಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ವಿದ್ಯಾಶ್ರೀ ಹೊಟ್ಟೇರ್ ಅವರು ಮಾತನಾಡಿ, “ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ತಡೆ ಕಾಯ್ದೆ-2012ನ್ನು ಸರ್ಕಾರವು ಜಾರಿಗೆಗೊಳಿಸಿದ್ದು, ಮಕ್ಕಳ ಮೇಲೆನ ದೌರ್ಜನ್ಯವನ್ನು ತಡೆಗಟ್ಟುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಈ ಕಾಯ್ದೆಯಡಿಯಲ್ಲಿ 18 ವರ್ಷದೂಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಸಂಜ್ಞೆ, ಶಾಬ್ದಿಕವಾಗಿ ಕಿರುಕುಳನ್ನು ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದಲ್ಲಿ ಅದು ವಿಚಾರಣಾ ಅರ್ಹ ಮತ್ತು ಜಾಮೀನು ರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಕಾರ್ಮಿಕ ನಿರೀಕ್ಷಕರಾದ ಮಹೇಶ ಬಡಿಗೇರ, ಗೆದಗೇರಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುಲಗಪ್ಪ, ಅಂಗನವಾಡಿ ಮೇಲ್ವಿಚಾರಕಿ ಸವಿತಾ ಆರೇರ್, ಯಲಬುರ್ಗಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸಟೇಬಲ್ ರತ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೊಡ್ಡಪ್ಪ ನಾಯಕ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ರವಿ ಬಡಿಗೇರ ನಿರೂಪಿಸಿದರು ದೇವರಾಜ್ ತಿಲಗರ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್