
ಬಳ್ಳಾರಿ, 21 ಮೇ (ಹಿ.ಸ.) :
ಆ್ಯಂಕರ್ : ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013ರನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು ಹಾಗೂ ಅವುಗಳ ಅಧೀನ ಕಚೇರಿಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಸಮಿತಿಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಅವರು ತಿಳಿಸಿದ್ದಾರೆ.
ಯಾವುದೇ ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆ, ಕಾರ್ಖಾನೆ, ಶಾಲಾ-ಕಾಲೇಜುಗಳಲ್ಲಿ 10 ಅಥವಾ 10ಕ್ಕಿಂತ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರೆ, ಅಂತಹ ಕಡೆಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದು ಆಯಾ ಕಚೇರಿಗಳ ಮುಖ್ಯಸ್ಥರ ಪ್ರಮುಖ ಜವಾಬ್ದಾರಿಯಾಗಿದೆ.
ಜಿಲ್ಲೆಯಾದ್ಯಂತ ಇರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ನಿಗಮ ಮಂಡಳಿಗಳು, ಸಾರ್ವಜನಿಕ ಉದ್ದಿಮೆಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್, ವಿಶ್ವವಿದ್ಯಾನಿಲಯಗಳು, ಶಾಲಾ-ಕಾಲೇಜುಗಳು, ಸಂಘ-ಸAಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಅಂಚೆ ಕಚೇರಿಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಮಾಲ್ಗಳು, ಆಭರಣ ಮಳಿಗೆಗಳು, ಬ್ಯಾಂಕ್ಗಳು – ಈ ಎಲ್ಲೆಡೆ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲಿನ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಮತ್ತು ಸ್ವೀಕೃತ ದೂರುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು 2013ರ ಅಧಿನಿಯಮವನ್ನು ಜಾರಿಗೆ ತಂದಿದೆ.
ಔಪಚಾರಿಕ-ಅನೌಪಚಾರಿಕ ಹಾಗೂ ಸಂಘಟಿತ-ಅಸ0ಘಟಿತ ವಲಯದ ಮಹಿಳಾ ನೌಕರರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಜೂನ್ 9ರ ಒಳಗಾಗಿ ಈ ಕುರಿತಾದ ಮಾಹಿತಿಯನ್ನು ಕೇಂದ್ರ ಸರ್ಕಾರದ ‘ಶೀ-ಬಾಕ್ಸ್’ ಪೋರ್ಟಲ್ನಲ್ಲಿ ನೋಂದಣಿ ಮಾಡದಿದ್ದರೆ ರೂ.50,000 ದಂಡ ವಿಧಿಸುವುದರ ಜೊತೆಗೆ, ಖಾಸಗಿ ಕಚೇರಿಗಳ ಪರವಾನಗಿ (ಲೈಸೆನ್ಸ್) ರದ್ದುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮಿತಿಯ ರಚನೆ ಹೇಗಿರಬೇಕು? :
ಪ್ರತಿಯೊಂದು ಸಂಸ್ಥೆಯ ಆಂತರಿಕ ದೂರು ಸಮಿತಿಯಲ್ಲಿ ಈ ಕೆಳಗಿನ ಸದಸ್ಯರಿರಬೇಕು. ಅಧ್ಯಕ್ಷೆಯಾಗಿ ಸಂಸ್ಥೆಯ ಹಿರಿಯ ಮಹಿಳಾ ಉದ್ಯೋಗಿ, ಸದಸ್ಯರು (ಇಬ್ಬರು)- ಮಹಿಳಾ ಕಲ್ಯಾಣ, ಸಾಮಾಜಿಕ ಜಾಗೃತಿ ಅಥವಾ ಕಾನೂನು ಜ್ಞಾನ ಹೊಂದಿರುವ ಸಿಬ್ಬಂದಿ. ಹೊರಗಿನ ಸದಸ್ಯರು (ಒಬ್ಬರು)- ಮಹಿಳಾ ಹಕ್ಕುಗಳು ಅಥವಾ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅನುಭವವಿರುವ ಎನ್ಜಿಒ ಪ್ರತಿನಿಧಿ ಅಥವಾ ತಜ್ಞರು ಇರಬೇಕು. ಈ ಕುರಿತಾದ ಸಮಗ್ರ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಬೇಕಾಗಿರುವುದರಿಂದ, ಜೂನ್ 9ರ ಒಳಗಾಗಿ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು.
ಖಾಸಗಿ ಕಚೇರಿಗಳ ಮೊದಲ ಹಂತದ ನೋಂದಣಿಗೆ (https://shebox.wcd.gov.in/registerOffices) ಗೆ ಭೇಟಿ ನೀಡಬಹುದು ಹಾಗೂ ಸಮಿತಿಯ ವಿವರಗಳನ್ನು ಅಪ್ಲೋಡ್ ಮಾಡಲು (https://shebox.wcd.gov.in/signin) ಗೆ ಆನ್ ಲೈನ್ ವೆಬ್ ಸೈಟ್ ಗೆ ವೀಕ್ಷಿಸಬಹುದು.
ಈಗಾಗಲೇ ಸಮಿತಿ ರಚನೆಯಾಗಿದ್ದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು. ಹೊಸದಾಗಿ ಸಮಿತಿ ರಚಿಸದ ಹಾಗೂ ಪೋರ್ಟಲ್ನಲ್ಲಿ ಮಾಹಿತಿ ಅಪ್ಲೋಡ್ ಮಾಡದ ಸಂಸ್ಥೆಗಳ ವಿರುದ್ಧ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013ರ ಸೆಕ್ಷನ್ 26 (1)ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ಮೊ.7353901862 ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್