ಅಳಿವಿನ ಅಂಚಿನತ್ತ ಗರಗ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ
ಧಾರವಾಡ, 20 ಮೇ (ಹಿ.ಸ.) : ಆ್ಯಂಕರ್ : ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತವರೂರು, ಖಾದಿ ಚಳವಳಿಯ ಜೀವನಾಡಿ ಹಾಗೂ ರಾಷ್ಟ್ರಧ್ವಜ ಉತ್ಪಾದನೆಯ ಹೆಮ್ಮೆಯ ಕೇಂದ್ರವೆಂದು ಗುರುತಿಸಿಕೊಂಡಿದ್ದ ಧಾರವಾಡ ತಾಲೂಕಿನ ಗರಗ ಗ್ರಾಮ ಇಂದು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ದೇಶದ ಅಧಿಕೃತ ತ್ರ
गरागा खादी ग्राम उद्योग केंद्र की तस्वीरें


ಧಾರವಾಡ, 20 ಮೇ (ಹಿ.ಸ.) :

ಆ್ಯಂಕರ್ : ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತವರೂರು, ಖಾದಿ ಚಳವಳಿಯ ಜೀವನಾಡಿ ಹಾಗೂ ರಾಷ್ಟ್ರಧ್ವಜ ಉತ್ಪಾದನೆಯ ಹೆಮ್ಮೆಯ ಕೇಂದ್ರವೆಂದು ಗುರುತಿಸಿಕೊಂಡಿದ್ದ ಧಾರವಾಡ ತಾಲೂಕಿನ ಗರಗ ಗ್ರಾಮ ಇಂದು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ದೇಶದ ಅಧಿಕೃತ ತ್ರಿವರ್ಣ ಧ್ವಜಕ್ಕೆ ಅಗತ್ಯವಿರುವ ಕೈಮಗ್ಗ ಬಟ್ಟೆ ತಯಾರಿಸುವ ಏಕೈಕ ಬಿಐಎಸ್ ಮಾನ್ಯತೆ ಪಡೆದ ಕೇಂದ್ರವಾಗಿರುವ ಗರಗ ಕ್ಷೇತ್ರೀಯ ಸೇವಾ ಸಂಘವು ಇದೀಗ ಮಾರಾಟ ಕುಸಿತ, ಕಾರ್ಮಿಕರ ಕೊರತೆ ಮತ್ತು ಮಾರುಕಟ್ಟೆ ಸ್ಪರ್ಧೆಯಿಂದ ಅಸ್ತಿತ್ವದ ಹೋರಾಟ ನಡೆಸುತ್ತಿದೆ.

ಧಾರವಾಡ ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಗರಗ ಗ್ರಾಮವು ಇತಿಹಾಸ, ಸಂಸ್ಕೃತಿ ಹಾಗೂ ಖಾದಿ ಪರಂಪರೆಯ ಸಂಗಮವಾಗಿದೆ. ಮಹಾರಾಷ್ಟ್ರ ಗಡಿಭಾಗದ ಪ್ರಭಾವ ಹೊಂದಿರುವ ಈ ಗ್ರಾಮ ಒಂದು ಕಾಲದಲ್ಲಿ ಸಾಮಾಜಿಕ ಅಶಾಂತಿ, ಮದ್ಯಪಾನ ಹಾಗೂ ವೈಷಮ್ಯಗಳಿಂದ ಸುದ್ದಿಯಾಗುತ್ತಿದ್ದರೂ, ಶಿಕ್ಷಣ ಮತ್ತು ಜಾಗೃತಿಯ ಬೆಳವಣಿಗೆಯಿಂದ ಹೊಸ ರೂಪ ಪಡೆದಿದೆ.

ಯಾತ್ರಾ ಕ್ಷೇತ್ರ ಹಾಗೂ ತತ್ವಚಿಂತನೆಯ ನೆಲೆ

ಗರಗವು ಶ್ರೀ ಮಡಿವಾಳೇಶ್ವರ ಮಠದ ಭಕ್ತರ ಪ್ರಮುಖ ಯಾತ್ರಾಸ್ಥಳವಾಗಿದೆ. 19ನೇ ಶತಮಾನದ ಸಂತ ತತ್ವಜ್ಞಾನಿ ಶ್ರೀ ಮಡಿವಾಳೇಶ್ವರರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಹಾಗೂ ಶಿಶುನಾಳ ಶರೀಫರ ಸಮಕಾಲೀನರಾಗಿದ್ದು, ವೀರಶೈವ-ಲಿಂಗಾಯತ ಹಾಗೂ ಸೂಫಿ ಪರಂಪರೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

ಗ್ರಾಮದ ಸಮೀಪದ ಹನುಮಂತ ದೇವಸ್ಥಾನದಲ್ಲಿ 11ನೇ ಶತಮಾನದ ಪುರಾತನ ಕನ್ನಡ ಶಾಸನವೂ ಕಂಡುಬರುತ್ತದೆ. ಇದೇ ವೇಳೆ ಸರಳ ಹಾಗೂ ತಪಸ್ವಿ ಜೀವನ ನಡೆಸಿದ ಶ್ರೀ ಆತ್ಮಾನಂದ ಸ್ವಾಮೀಜಿಯ ಆಶ್ರಮವೂ ಗರಗದ ಮತ್ತೊಂದು ಆಧ್ಯಾತ್ಮಿಕ ಕೇಂದ್ರವಾಗಿದೆ.

ರಾಷ್ಟ್ರಧ್ವಜ ಉತ್ಪಾದನೆಯಲ್ಲಿ ಗರಗದ ಐತಿಹಾಸಿಕ ಸಾಧನೆ

ದೇಶದಲ್ಲಿ ಅಧಿಕೃತ ರಾಷ್ಟ್ರಧ್ವಜಕ್ಕೆ ಅಗತ್ಯವಿರುವ ಕೈಮಗ್ಗ ಬಟ್ಟೆ ತಯಾರಿಸಲು ಅನುಮತಿ ಪಡೆದ ಕೆಲವೇ ಕೇಂದ್ರಗಳಲ್ಲಿ ಗರಗವೂ ಒಂದಾಗಿತ್ತು. ಮಹಾರಾಷ್ಟ್ರದ ಲಾತೂರ್ ಸಮೀಪದ ಉದಗೀರ್ ಖಾದಿ ಕೇಂದ್ರ ಉತ್ಪಾದನೆ ನಿಲ್ಲಿಸಿದ ಬಳಿಕ ಗರಗವೇ ದೇಶದ ಪ್ರಮುಖ ಹಾಗೂ ಏಕೈಕ ಬಿಐಎಸ್ ಪ್ರಮಾಣಿತ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರವಾಗಿ ಉಳಿದಿದೆ.

ಧಾರವಾಡ ತಾಲೂಕು ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷ ಬಸವಪ್ರಭು ಹೊಸಕೇರಿ ಅವರ ಪ್ರಕಾರ, “ದೇಶದ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಗರಗದ ಪಾತ್ರ ಐತಿಹಾಸಿಕವಾಗಿದೆ. ಆದರೆ ಇಂದು ಖಾದಿ ಕ್ಷೇತ್ರವೇ ಸಂಕಷ್ಟದಲ್ಲಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

₹200 ಕೋಟಿಗೂ ಅಧಿಕ ಮೌಲ್ಯದ ಮಾರಾಟವಾಗದ ಖಾದಿ

ರಾಜ್ಯದ ವಿವಿಧ ಖಾದಿ ಉತ್ಪಾದನಾ ಕೇಂದ್ರಗಳಲ್ಲಿ ₹200 ಕೋಟಿಗೂ ಅಧಿಕ ಮೌಲ್ಯದ ಖಾದಿ ವಸ್ತುಗಳು ಮಾರಾಟವಾಗದೆ ಸಂಗ್ರಹವಾಗಿವೆ ಎಂದು ಹೊಸಕೇರಿ ತಿಳಿಸಿದ್ದಾರೆ.

“ಖಾದಿ ಕಾರ್ಮಿಕರಿಗೆ ಖಾದಿ ಮಂಡಳಿ ನಿಗದಿಪಡಿಸಿರುವ ವೇತನ ಮಾರುಕಟ್ಟೆಯ ಇತರ ಕ್ಷೇತ್ರಗಳಿಗಿಂತ ಕಡಿಮೆ. ಇದರಿಂದ ಹೊಸ ಕಾರ್ಮಿಕರು ಈ ಕ್ಷೇತ್ರಕ್ಕೆ ಬರುತ್ತಿಲ್ಲ. ಪರಿಣಾಮವಾಗಿ ಉತ್ಪಾದನೆ ಕುಸಿಯುತ್ತಿದೆ,” ಎಂದು ಅವರು ಹೇಳಿದ್ದಾರೆ.

ಮಾರಾಟ ಕುಸಿತಕ್ಕೆ ಬದಲಾಗುತ್ತಿರುವ ಫ್ಯಾಷನ್ ಕಾರಣ

ಖಾದಿ ಬಟ್ಟೆ ದುಬಾರಿ, ನಿರ್ವಹಣೆಗೆ ಕಷ್ಟಕರ ಹಾಗೂ ಆಧುನಿಕ ವಿನ್ಯಾಸಗಳಿಗೆ ಹೊಂದಿಕೆಯಾಗದಿರುವುದು ಮಾರಾಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.

“ಇಂದಿನ ಯುವಜನತೆ ಹೊಸ ವಿನ್ಯಾಸ ಹಾಗೂ ಆಕರ್ಷಕ ವಸ್ತ್ರಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಖಾದಿ ಸಂಸ್ಥೆಗಳು ಮಾರುಕಟ್ಟೆಯ ಬದಲಾವಣೆಗೆ ಹೊಂದಿಕೊಳ್ಳಲು ವಿಫಲವಾಗಿವೆ. ಇದೇ ಹಿನ್ನಡೆಯ ಪ್ರಮುಖ ಕಾರಣ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಆದೇಶ ಕಾಗದದಲ್ಲೇ?

ರಾಜ್ಯ ಸರ್ಕಾರವು ಸರ್ಕಾರಿ ನೌಕರರು ವಾರದಲ್ಲಿ ಒಂದು ದಿನ ಖಾದಿ ಧರಿಸಬೇಕು ಎಂಬ ಸೂಚನೆ ನೀಡಿದ್ದರೂ, ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಹೊಸಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಖಾದಿ ಧರಿಸುವುದನ್ನು ಕಡ್ಡಾಯಗೊಳಿಸಿರುವುದು ಖಾದಿಗೆ ಉತ್ತೇಜನ ನೀಡಿದ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

400ಕ್ಕೂ ಹೆಚ್ಚು ಕಾರ್ಮಿಕರಿಗೆ ಜೀವನಾಧಾರ

ಗರಗ ಖಾದಿ ಕೇಂದ್ರದಲ್ಲಿ ಸುಮಾರು 400 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 250 ಮಂದಿ ನೂಲು ಕತ್ತುವವರು ಹಾಗೂ 150 ಮಂದಿ ನೇಕಾರರು. ರಾಷ್ಟ್ರಧ್ವಜ ಬಟ್ಟೆಯೊಂದಿಗೆ ಇತರೆ ಖಾದಿ ಉತ್ಪನ್ನಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ.

“ನಮ್ಮ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟ ಹೊಂದಿದ್ದರೂ ಮಾರುಕಟ್ಟೆ ಪರಿಸ್ಥಿತಿಯಿಂದ ಸಂಪೂರ್ಣವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ,” ಎಂದು ಬಸವಪ್ರಭು ಹೊಸಕೇರಿ ತಿಳಿಸಿದ್ದಾರೆ.

ಅಳಿವಿನ ಭೀತಿ

ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿದ್ದ ಖಾದಿ ಇಂದು ಮಾರುಕಟ್ಟೆ ಸ್ಪರ್ಧೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ದೇಶದ ಹೆಮ್ಮೆಯ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರವೇ ಅಳಿವಿನ ಅಂಚಿನತ್ತ ಸಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಸರ್ಕಾರ ಮತ್ತು ಸಮಾಜ ಖಾದಿ ಕ್ಷೇತ್ರದ ಉಳಿವಿಗೆ ತಕ್ಷಣದ ಕ್ರಮ ಕೈಗೊಳ್ಳದಿದ್ದರೆ ಗರಗದಂತಹ ಐತಿಹಾಸಿಕ ಕೇಂದ್ರಗಳ ಅಸ್ತಿತ್ವವೇ ಅಪಾಯಕ್ಕೀಡಾಗುವ ಭೀತಿ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande