ಮೋರಟಗಿ ಗ್ರಾಮಕ್ಕೆ ಶಾಸಕ ಅಶೋಕ್ ಮನಗೂಳಿ ಭೇಟಿ, ಶೀಘ್ರ ಪರಿಹಾರ ವಿತರಿಸಲು ಸೂಚನೆ
ರಿ
ಸಾವು


ವಿಜಯಪುರ, 15 ಮೇ (ಹಿ.ಸ.) :

ಆಂಕರ್ : ನಿನ್ನೆ ರಾತ್ರಿ ಸುರಿದ ಅಕಾಲಿಕ ಗಾಳಿ ಹಾಗೂ ಭಾರಿ ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಮೋರಟಗಿ ಗ್ರಾಮದಲ್ಲಿ ನಡೆದಿದೆ. ಅಮೋಘಸಿದ್ದ ದೇವಸ್ಥಾನ ಸಮೀಪದ ಬಾಡಿಗೆ/ಮನೆ ಮೇಲೆ ಸಂಭವಿಸಿದ ಈ ದುರಂತವು ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತರನ್ನು ಗುರುನಾಥ ತಂದೆ ನಾಗಾಮೂರ್ತಿ ಬಡಿಗೇರ್ (35), ಅವರ ಪತ್ನಿ ಜ್ಯೋತಿ ಗುರುನಾಥ ಬಡಿಗೇರ್ (30), ಪುತ್ರಿ ಕಾಳಮ್ಮ ಗುರುನಾಥ ಬಡಿಗೇರ್ (9) ಹಾಗೂ ಪುತ್ರ ಕೀರ್ತಿ ಗುರುನಾಥ ಬಡಿಗೇರ್ (7) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಗಾಳಿ-ಮಳೆಯ ತೀವ್ರತೆ ಹೆಚ್ಚಾಗಿದ್ದ ವೇಳೆ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕುಟುಂಬ ಸದಸ್ಯರು ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಂದಗಿ ಶಾಸಕ ಅಶೋಕ್ ಮನಗೂಳಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಮೃತರ ಕುಟುಂಬದ ಸಂಬಂಧಿಕರನ್ನು ಭೇಟಿ ಮಾಡಿದ ಅವರು ಘಟನೆ ವಿವರಗಳನ್ನು ಪಡೆದು ತೀವ್ರ ಬೇಸರ ಹಾಗೂ ದುಃಖ ವ್ಯಕ್ತಪಡಿಸಿದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ಶಾಸಕರು, ಸರ್ಕಾರದಿಂದ ನೀಡಲಾಗುವ ಪರಿಹಾರಧನವನ್ನು ಶೀಘ್ರದಲ್ಲಿಯೇ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಸ್ಥಳಕ್ಕೆ ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ತಹಸೀಲ್ದಾರ್ ಅವರು ಮಾತನಾಡಿ, “ಈ ಘಟನೆ ಪ್ರಕೃತಿಯ ಅಕಸ್ಮಾತ್ ಪರಿಣಾಮದಿಂದ ಸಂಭವಿಸಿದೆ.

ಮೃತರ ಕುಟುಂಬಕ್ಕೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕುಟುಂಬದ ಆಕ್ರಂದನ ಮನಕಲಕುವಂತಿತ್ತು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಳೆಯ ಮನೆಗಳ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande