
ಬಾಗಲಕೋಟೆ, 14 ಮೇ ಆಂಕರ್ : ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿರುವ ತಾಂತ್ರಿಕ ಪ್ರತಿಭೆ, ಸೃಜನಶೀಲತೆ ಹಾಗೂ ವೈಜ್ಞಾನಿಕ ಚಿಂತನೆಗೆ ವೇದಿಕೆ ಕಲ್ಪಿಸಿದ ‘ಇಂಟರ್ನೆಟ್ ಆಫ್ ಥಿಂಗ್ಸ್ (IoT)’ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮವು ಇಂದು ಬಾಗಲಕೋಟೆ
ನಗರದಲ್ಲಿ ವಿಶೇಷ ಗಮನ ಸೆಳೆಯಿತು.
ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ಹಾಗೂ ವಿವಿಧ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳ ಸಹಯೋಗದಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ ಆವರಣದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ನವೀನ ಆವಿಷ್ಕಾರಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಬೀದರ್, ಬಾಗಲಕೋಟೆ, ತಿಕೋಟಾ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಹಲವು IoT ಮಾದರಿಗಳನ್ನು ಪ್ರದರ್ಶಿಸಿದರು. ಕೃಷಿ, ನೀರಿನ ನಿರ್ವಹಣೆ, ಸ್ವಯಂಚಾಲಿತ ವಿದ್ಯುತ್ ವ್ಯವಸ್ಥೆ, ಸುರಕ್ಷತಾ ತಂತ್ರಜ್ಞಾನ, ಪರಿಸರ ಸಂರಕ್ಷಣೆ ಹಾಗೂ ಸ್ಮಾರ್ಟ್ ಗ್ರಾಮ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾಜೆಕ್ಟ್ಗಳು ವಿಶೇಷ ಆಕರ್ಷಣೆಯಾಗಿದ್ದವು.
ವಿದ್ಯಾರ್ಥಿಗಳ ತಾಂತ್ರಿಕ ತಿಳುವಳಿಕೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ನವೀನ ಚಿಂತನೆ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಮತ್ತು ಶಿಕ್ಷಕರನ್ನು ಆಶ್ಚರ್ಯಚಕಿತರನ್ನಾಗಿಸಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀಮತಿ ಆಶಾ ಎಂ. ಪಾಟೀಲ್ ಅವರು, “ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಇಂತಹ ತಂತ್ರಜ್ಞಾನಾಧಾರಿತ ಅವಕಾಶಗಳು ದೊರೆಯುತ್ತಿರುವುದು ಅತ್ಯಂತ ಸಂತಸದ ವಿಚಾರ. ಪ್ರತಿಭೆ ನಗರಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಈ ಮಕ್ಕಳು ಸಾಬೀತುಪಡಿಸಿದ್ದಾರೆ” ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಸಂದೇಶ ನೀಡಿದ ಅವರು, “ಇಂಗ್ಲೀಷೇ ಬರಬೇಕು, ಕನ್ನಡದಲ್ಲಿ ಏನೂ ಸಾಧನೆ ಸಾಧ್ಯವಿಲ್ಲ ಎಂಬ ಕೀಳರಿಮೆ ಮನಸ್ಸಿನಿಂದ ದೂರ ಮಾಡಿಕೊಳ್ಳಬೇಕು. ಭಾಷೆ ಸಾಧನೆಯ ಅಡೆತಡೆಯಲ್ಲ. ಆತ್ಮವಿಶ್ವಾಸ, ಪರಿಶ್ರಮ ಮತ್ತು ಕಲಿಯುವ ಆಸಕ್ತಿ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು” ಎಂದು ಪ್ರೇರಣಾದಾಯಕವಾಗಿ ಹೇಳಿದರು.
“ಇಂದಿನ ಮಕ್ಕಳು ನಾಳೆಯ ವಿಜ್ಞಾನಿಗಳು, ತಂತ್ರಜ್ಞರು ಹಾಗೂ ನವೋದ್ಯಮಿಗಳಾಗಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವಕಾಶ ದೊರೆತರೆ ದೇಶದ ಅಭಿವೃದ್ಧಿಯಲ್ಲಿ ಅವರು ಮಹತ್ತರ ಪಾತ್ರವಹಿಸಬಹುದು” ಎಂದು ಆಶಾ ಪಾಟೀಲ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ಹಲವು ಮಾದರಿಗಳನ್ನು ಅತಿಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚುತ್ತಿರುವುದು ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿ.ಸಿ. ಸಜ್ಜನವರ, ಎಂ.ಎನ್. ದೇಶ್ ಮಖ್, ಡಾ. ಜೆ.ಎಸ್. ಗೋನಲ್, ಅಗಸ್ತ್ಯ ಸಂಸ್ಥೆಯ ಗೀತಾ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಹೊಸ ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande