
ವಿಜಯಪುರ, 14 ಮೇ (ಹಿ.ಸ.):
ಆಂಕರ್ : ಕೇರಳ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ
ವಿ.ಡಿ. ಸತೀಶನ್ ಅವರಿಗೆ ಕರ್ನಾಟಕದ ಹಿರಿಯ ಸಚಿವ ಎಂ ಬಿ ಪಾಟೀಲ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟಣೆ ಹೊರಡಿಸಿರುವ ಸಚಿವ ಎಂ.ಬಿ. ಪಾಟೀಲ್ ಅವರು, ವಿದ್ಯಾರ್ಥಿ ದಶೆಯಲ್ಲಿಯೇ ಎನ್ಎಸ್ಯುಐ ಮೂಲಕ ರಾಜಕೀಯ ಪ್ರವೇಶ ಮಾಡಿದ ವಿ.ಡಿ. ಸತೀಶನ್ ಅವರು ತಮ್ಮ ಪರಿಶ್ರಮ, ಸಂಘಟನಾ ಸಾಮರ್ಥ್ಯ ಹಾಗೂ ಜನಪರ ಚಿಂತನೆಯ ಮೂಲಕ ರಾಜಕೀಯದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆರು ಬಾರಿ ಶಾಸಕರಾಗಿ ಹಾಗೂ ಪ್ರತಿ ಪಕ್ಷದ ನಾಯಕರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿರುವ ಅವರ ಅನುಭವವೇ ಇಂದು ಅವರನ್ನು ರಾಜ್ಯದ ಅತ್ಯುನ್ನತ ಹುದ್ದೆಗೆ ಕೊಂಡೊಯ್ದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ ಹಾಗೂ ಅಭಿವೃದ್ಧಿ ಪರ ದೃಷ್ಟಿಕೋನ ಹೊಂದಿರುವ ಸತೀಶನ್ ಅವರು ಕೇರಳದ ಸಮಗ್ರ ಪ್ರಗತಿಗೆ ಹೊಸ ದಿಕ್ಕು ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ, ಆರೋಗ್ಯ, ಕೈಗಾರಿಕೆ, ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೇರಳವನ್ನು ಇನ್ನಷ್ಟು ಪ್ರಗತಿಪರ ರಾಜ್ಯವನ್ನಾಗಿ ರೂಪಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ ಹಾಗೂ ಜನಕಲ್ಯಾಣದ ಆಶಯಗಳನ್ನು ಹೊಂದಿರುವ ಆಡಳಿತದ ಮೂಲಕ ರಾಜ್ಯದ ಅಭಿವೃದ್ಧಿಗೆ ಅವರು ಶ್ರಮಿಸಲಿದ್ದಾರೆ ಎಂದು ಹೇಳಿದ್ದಾರೆ.
ಅವರ ನಾಯಕತ್ವದಲ್ಲಿ ಕೇರಳ ರಾಜ್ಯವು ದೇಶದ ಮಾದರಿ ಆಡಳಿತ ವ್ಯವಸ್ಥೆ ಹೊಂದಿದ ರಾಜ್ಯವಾಗಿ ಮತ್ತಷ್ಟು ಹೊರಹೊಮ್ಮಲಿದೆ ಎಂಬ ವಿಶ್ವಾಸವಿದ್ದು, ಕೇರಳದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಆಡಳಿತ ನೀಡುವಲ್ಲಿ ಅವರು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande