
ವಿಜಯಪುರ, 14 ಮೇ (ಹಿ.ಸ.) :
ಆಂಕರ್ : ಉತ್ತರ ವಲಯ ಬೆಳಗಾವಿಯ ಮಾನ್ಯ ಪೊಲೀಸ್ ಮಹಾನಿರೀಕ್ಷಕರಾದ ಚೇತನ್ ಸಿಂಗ್ ರಾಥೋರ್ ಅವರು ಇಂದು ವಿಜಯಪುರ ಜಿಲ್ಲೆಯ ಇಂಡಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಈ ವೇಳೆ ಠಾಣೆಯ ಆಡಳಿತಾತ್ಮಕ ಕಾರ್ಯವೈಖರಿ, ಅಪರಾಧ ಪ್ರಕರಣಗಳ ತನಿಖೆ, ಸಾರ್ವಜನಿಕ ಸೇವಾ ಕಾರ್ಯಗಳು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕ್ರಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಪರಿವೀಕ್ಷಣೆಯ ಸಂದರ್ಭದಲ್ಲಿ ಪೊಲೀಸ್ ಠಾಣೆಯ ವಿವಿಧ ಕಡತಗಳು, ಅಪರಾಧ ದಾಖಲಾತಿಗಳು, ತನಿಖಾ ಪ್ರಗತಿ ವರದಿಗಳು ಹಾಗೂ ಸಾರ್ವಜನಿಕರಿಂದ ಬಂದಿರುವ ದೂರುಗಳ ನಿರ್ವಹಣೆಯನ್ನು ಐಜಿಪಿ ಅವರು ಪರಿಶೀಲಿಸಿದರು.
ಪ್ರಕರಣಗಳ ತ್ವರಿತ ತನಿಖೆ, ಅಪರಾಧ ಪತ್ತೆ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ಸಾರ್ವಜನಿಕರಿಗೆ ಸ್ನೇಹಪರ ಪೊಲೀಸ್ ಸೇವೆ ಒದಗಿಸುವ ಕುರಿತು ಅಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಇದೇ ವೇಳೆ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಕಳ್ಳತನ, ಅಕ್ರಮ ಚಟುವಟಿಕೆಗಳು ಹಾಗೂ ಸಮಾಜ ವಿರೋಧಿ ಕೃತ್ಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚಿಸಿದರು.
ಅಪರಾಧ ನಿಯಂತ್ರಣಕ್ಕಾಗಿ ರಾತ್ರಿ ಗಸ್ತು ಹೆಚ್ಚಿಸುವುದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸುವುದು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಬೆಳೆಸುವಂತೆ ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿಷ್ಠೆ, ಶಿಸ್ತು ಹಾಗೂ ಜನಸ್ನೇಹಿ ಕಾರ್ಯಪದ್ಧತಿ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಿದ ಐಜಿಪಿ ಅವರು, ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯೂ ಸಾರ್ವಜನಿಕರ ವಿಶ್ವಾಸ ಗಳಿಸುವಂತೆ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಪರಿವೀಕ್ಷಣೆ ವೇಳೆ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಐಜಿಪಿ ಅವರ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / jyothi deshpande