
ಬಾಗಲಕೋಟೆ, 14 ಮೇ (ಹಿ.ಸ.)
ಆ್ಯಂಕರ್ : ಚಾಲುಕ್ಯರ ಐತಿಹಾಸಿಕ ನಾಡಾದ ಬಾದಾಮಿಯ ಶಕ್ತಿ ದೇವತೆ ಹಾಗೂ ಲಕ್ಷಾಂತರ ಭಕ್ತರ ಆರಾಧ್ಯ ದೈವವಾದ ಶ್ರೀ ಬನಶಂಕರಿ ದೇವಿಯ ದರ್ಶನವನ್ನು ಇಂದು ಸಂಸದ ಗೋವಿಂದ ಕಾರಜೋಳ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಆಗಮಿಸಿದ ಅವರು ದೇವಿಗೆ ಪೂಜೆ ಸಲ್ಲಿಸಿ ನಾಡಿನ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥಿಸಿದರು. ರಾಜ್ಯದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ, ಜನರು ಆರೋಗ್ಯವಂತರಾಗಿರಲಿ ಹಾಗೂ ರೈತರು, ಕಾರ್ಮಿಕರು, ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರ ಜೀವನ ಸುಖಮಯವಾಗಿರಲಿ ಎಂದು ದೇವಿಯಲ್ಲಿ ಬೇಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ಬನಶಂಕರಿ ದೇವಿ ನಾಡಿನ ಜನರ ಭಕ್ತಿಯ ಪ್ರತೀಕವಾಗಿದ್ದು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಎಂದು ಹೇಳಿದರು. ತಾಯಿಯ ಆಶೀರ್ವಾದದಿಂದ ರಾಜ್ಯದಲ್ಲಿ ಸದ್ಭಾವನೆ ಹಾಗೂ ಅಭಿವೃದ್ಧಿಯ ವಾತಾವರಣ ಇನ್ನಷ್ಟು ಬಲವಾಗಲಿ ಎಂದು ಆಶಿಸಿದರು.
ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದೇವಿಯ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರು ಕೂಡ ಗೋವಿಂದ ಕಾರಜೋಳ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಬಾದಾಮಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರೀ ಬನಶಂಕರಿ ದೇವಿಯ ಮೇಲಿನ ಅಪಾರ ಭಕ್ತಿ ಇರುವುದರಿಂದ ದೇವಸ್ಥಾನದಲ್ಲಿ ದಿನವೂ ಭಕ್ತರ ದಟ್ಟಣೆ ಕಂಡು ಬರುತ್ತಿದೆ. ವಿಶೇಷವಾಗಿ ಹಬ್ಬ ಹಾಗೂ ಅಮಾವಾಸ್ಯೆ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande