ಭೂ ಪರಿಹಾರ ವಿಳಂಬಕ್ಕೆ ಕೋರ್ಟ್ ಕಠಿಣ ಕ್ರಮ
ವಿಳಂಬ
ಜಪ್ತಿ


ಬಾಗಲಕೋಟೆ, 14 ಮೇ (ಹಿ.ಸ.) :

ಆಂಕರ್ : ಸರ್ಕಾರಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರು ನ್ಯಾಯಸಮ್ಮತ ಪರಿಹಾರಕ್ಕಾಗಿ ವರ್ಷಗಳ ಕಾಲ ಅಲೆದಾಡಬೇಕಾಗುತ್ತಿರುವ ಘಟನೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಕೇಳಿ ಬರುತ್ತಿವೆ. ಅದೇ ರೀತಿಯ ಮತ್ತೊಂದು ಘಟನೆ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಮಲಪ್ರಭಾ ಬಲದಂಡೆ ಕಾಲುವೆ ಯೋಜನೆಗೆ ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯವೇ ಕಠಿಣ ಕ್ರಮ ಕೈಗೊಂಡಿದೆ.

ಪರಿಹಾರ ನೀಡುವಂತೆ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರ ವಾಹನ ಜಪ್ತಿ ಮಾಡುವಂತೆ ಆದೇಶ ಹೊರಡಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಇನಾಂ ಹೂಲಗೇರಿ ಗ್ರಾಮದ ರೈತ ಡೋಂಗ್ರಿಸಾಬ್ ರಾಜೇಸಾಬ್ ಸಾಸಬಾಳ ಅವರಿಗೆ ಸೇರಿದ ಸರ್ವೆ ನಂ.161/1ರ ಸುಮಾರು 3 ಎಕರೆ ಜಮೀನನ್ನು ಮಲಪ್ರಭಾ ಬಲದಂಡೆ ಕಾಲುವೆ ಕಾಮಗಾರಿಗಾಗಿ 2003-04ನೇ ಸಾಲಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಜಮೀನು ಕಳೆದುಕೊಂಡ ರೈತನಿಗೆ ಸಮರ್ಪಕ ಪರಿಹಾರ ನೀಡದ ಹಿನ್ನೆಲೆಯಲ್ಲಿ ಅವರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡುತ್ತಿದ್ದರು.

ಪರಿಹಾರ ಸಿಗದೇ ಬೇಸತ್ತ ರೈತ ಡೋಂಗ್ರಿಸಾಬ್ ಅವರು ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ರೈತನಿಗೆ 1 ಕೋಟಿ 82 ಲಕ್ಷ 21 ಸಾವಿರ 162 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಹಾರ ಮೊತ್ತ ಬಿಡುಗಡೆ ಮಾಡುವಲ್ಲಿ ವಿಳಂಭ ಮಾಡುತ್ತಲೇ ಬಂದಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ನಿಲುವು ತಾಳಿ, ನವನಗರದಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರ ಎನ್.ಎಂ. ದಿವಟೆ ಅವರ ಅಧಿಕೃತ ವಾಹನ ಜಪ್ತಿ ಮಾಡುವಂತೆ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳ ಸಮ್ಮುಖದಲ್ಲಿ ವಾಹನ ಜಪ್ತಿ ಪ್ರಕ್ರಿಯೆ ಜರುಗಿತು.

ಈ ಘಟನೆ ಇದೀಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ನಡೆಯುತ್ತಿರುವ ವಿಳಂಭ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತೊಮ್ಮೆ ಬಹಿರಂಗವಾಗಿದೆ. ಒಂದು ಕಡೆ ರೈತರು ಜೀವನಾಧಾರವಾದ ಜಮೀನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದರೆ, ಮತ್ತೊಂದೆಡೆ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಸಂತ್ರಸ್ತ ರೈತ ಡೋಂಗ್ರಿಸಾಬ್ ಸಾಸಬಾಳ ಅವರು ಮಾತನಾಡಿ, “ಕಳೆದ ಹಲವು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಿದ್ದೇವೆ. ನ್ಯಾಯಾಲಯ ನಮ್ಮ ಪರ ಆದೇಶ ನೀಡಿದರೂ ಇಲಾಖೆ ಸ್ಪಂದಿಸಲಿಲ್ಲ. ಕೊನೆಗೆ ವಾಹನ ಜಪ್ತಿಯಾದ ನಂತರವಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ,” ಎಂದು ಬೇಸರ ವ್ಯಕ್ತಪಡಿಸಿದರು.

ಕಾನೂನು ತಜ್ಞರ ಪ್ರಕಾರ, ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಇಂತಹ ಕ್ರಮಗಳು ಅಪರೂಪವಾಗಿದ್ದು, ಇದು ಇತರ ಇಲಾಖೆಗಳಿಗೂ ಎಚ್ಚರಿಕೆಯ ಸಂದೇಶವಾಗಿದೆ. ಭೂಸ್ವಾಧೀನ ಪ್ರಕರಣಗಳಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ನೀಡದಿದ್ದರೆ ಕಾನೂನು ಕ್ರಮಗಳು ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಮಲಪ್ರಭಾ ಬಲದಂಡೆ ಕಾಲುವೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತನಿಗೆ ನ್ಯಾಯ ದೊರಕಿಸಲು ನ್ಯಾಯಾಲಯ ಕೈಗೊಂಡಿರುವ ಈ ಕ್ರಮ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು, ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಡುತ್ತಿರುವ ಅನೇಕ ಸಂತ್ರಸ್ತ ರೈತರಿಗೆ ಹೊಸ ಭರವಸೆ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande