
ವಿಜಯಪುರ, 13 ಮೇ (ಹಿ.ಸ.) :
ಆಂಕರ್ : ಅಪರಾಧ ಕೃತ್ಯಗಳ ತನಿಖೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಪೊಲೀಸರ ಕರ್ತವ್ಯ ಎಂಬ ಸಾಮಾನ್ಯ ಕಲ್ಪನೆಗೆ ವಿಭಿನ್ನ ಉದಾಹರಣೆಯಾಗಿ ವಿಜಯಪುರ ಜಿಲ್ಲಾ ಪೊಲೀಸರು ಸಮಾಜಮುಖಿ ಕಾರ್ಯದ ಮೂಲಕ ಹೊಸ ಮಾದರಿಯನ್ನು ನಿರ್ಮಿಸಿದ್ದಾರೆ.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದ ವೃದ್ಧರು ಹಾಗೂ ಒಂಟಿ ಮಹಿಳೆಯರ ಮನೆ ಬಾಗಿಲಿಗೆ ತೆರಳಿ ಅವರಿಗೆ ಅಗತ್ಯ ದಾಖಲೆ, ಮಾರ್ಗದರ್ಶನ ಹಾಗೂ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಪೊಲೀಸರು ನಿಜವಾದ ಅರ್ಥದಲ್ಲಿ ‘ಆಸರೆ’ಯಾಗಿದ್ದಾರೆ.
ಜಿಲ್ಲೆಯ 73 ಮಂದಿ ವೃದ್ಧರು ಮತ್ತು ಒಂಟಿ ಮಹಿಳೆಯರನ್ನು ಗುರುತಿಸಿ, ಅವರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ಪಿಂಚಣಿ, ಇಂದಿರಾ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಭಾಗ್ಯ ಜ್ಯೋತಿ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಪೊಲೀಸರು ನೆರವಾಗಿದ್ದಾರೆ. ಸರ್ಕಾರಿ ಕಚೇರಿಗಳ ಸುತ್ತಾಟದಿಂದ ಸಂಕಷ್ಟ ಅನುಭವಿಸುತ್ತಿದ್ದ ಫಲಾನುಭವಿಗಳಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಅರ್ಜಿಗಳನ್ನು ಸಲ್ಲಿಸುವುದರಿಂದ ಹಿಡಿದು ಯೋಜನೆಗಳ ಮಂಜೂರಾತಿವರೆಗೆ ಪೊಲೀಸರು ಕೈಜೋಡಿಸಿದ್ದಾರೆ.
ಪೊಲೀಸರ ವಿಶೇಷ ಕಾಳಜಿಯಿಂದಾಗಿ 14 ಮಂದಿಗೆ ವೃದ್ಧಾಪ್ಯ ವೇತನ, 16 ಮಹಿಳೆಯರಿಗೆ ವಿಧವಾ ವೇತನ ಹಾಗೂ 8 ಮಂದಿಗೆ ವಿಕಲಚೇತನ ಪಿಂಚಣಿ ಮಂಜೂರಾಗಿದೆ. ಜೊತೆಗೆ 10 ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ದೊರಕಿಸಿಕೊಡಲಾಗಿದೆ. ಇದಲ್ಲದೆ, 3 ವೃದ್ಧೆಯರಿಗೆ ಉಚಿತ ಕಣ್ಣಿನ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, 4 ಮಂದಿಗೆ ಅಂಚೆ ಬ್ಯಾಂಕ್ ಖಾತೆ ತೆರೆಯುವ ಕಾರ್ಯವೂ ನೆರವೇರಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಸಮಾಜಮುಖಿ ಕಾರ್ಯಕ್ರಮ ಸಾರ್ವಜನಿಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸ್ ಇಲಾಖೆ ಕೇವಲ ಕಾನೂನು ಜಾರಿಗೊಳಿಸುವ ಸಂಸ್ಥೆಯಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಜನರ ಬೆಂಬಲಿಗರೂ ಆಗಬಹುದು ಎಂಬ ಸಂದೇಶವನ್ನು ಈ ಕಾರ್ಯಾಚರಣೆ ಸಾರಿದೆ.
‘ಆಸರೆ’ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿದ್ದ ಪೊಲೀಸರ ಮೇಲಿನ ಭಯವನ್ನು ದೂರ ಮಾಡಿ, ವಿಶ್ವಾಸ ಮತ್ತು ಆತ್ಮೀಯತೆಯ ಸೇತುವೆ ನಿರ್ಮಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande