
ಬೆಂಗಳೂರು, 01 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದ ಆಡಳಿತ ಹಾಗೂ ಕಾಂಗ್ರೆಸ್ ಒಳಜಗಳ ವಿಚಾರವಾಗಿ ತೀವ್ರ ಟೀಕೆ ವ್ಯಕ್ತಪಡಿಸಿರುವ ಪ್ರತಿ ಪಕ್ಷದ ನಾಯಕ ಆರ್.ಅಶೋಕ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರಣಿ ಪ್ರಶ್ನೆಗಳು ಎತ್ತಿದ್ದಾರೆ.
ತಮ್ಮ ಹೇಳಿಕೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ “ಅಧಿಕಾರ ಸಂಘರ್ಷ”ದಿಂದ ರಾಜ್ಯ ಆಡಳಿತ ದಿಕ್ಕುತೋಚದ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದ್ದಾರೆ.
“ಕರ್ನಾಟಕವು ಯೋಗ್ಯ ಆಡಳಿತಕ್ಕಾಗಿ ಮತ ನೀಡಿದೆ, ಆದರೆ ಇದೀಗ ಅದು ಅಂತ್ಯವಿಲ್ಲದ ಅಧಿಕಾರ ಹಂಚಿಕೆ ರಾಜಕಾರಣದ ನಡುವೆ ಸಿಲುಕಿದೆ. ದೆಹಲಿಯ ಕಾಂಗ್ರೆಸ್ ನಾಯಕತ್ವ ಮೌನವಾಗಿ ನೋಡುತ್ತಿರುವಾಗ, ರಾಜ್ಯವು ನಾಯಕತ್ವ ವೈಫಲ್ಯಕ್ಕೆ ಬೆಲೆ ತೆರುತ್ತಿದೆ” ಎಂದು ಅವರು ಟೀಕಿಸಿದ್ದಾರೆ.
ಇನ್ನಷ್ಟು ಕಟುವಾಗಿ ಪ್ರತಿಕ್ರಿಯಿಸಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು “ದೆಹಲಿಯಿಂದ ಮಧ್ಯಸ್ಥಿಕೆಗಾಗಿ ಕಳುಹಿಸುವ” ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಉಲ್ಲೇಖಿಸಿ, ಇದು ರಾಜ್ಯದಲ್ಲಿ ನಾಯಕತ್ವದ ದುರ್ಬಲತೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಉನ್ನತ ನಾಯಕತ್ವವಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೇರ ಪ್ರಶ್ನೆ ಎತ್ತಿದ ಅಶೋಕ್, “ಇದು ನಿಮ್ಮ ಆಡಳಿತ ಮಾದರಿಯೇ? ಇಬ್ಬರು ನಾಯಕರು ಒಟ್ಟಿಗೆ ಕೆಲಸ ಮಾಡಲಾರದೇ ಇದ್ದರೆ, ದೆಹಲಿಯಿಂದ ‘ರೆಫರಿ’ ಕಳುಹಿಸುವುದೇ ಪರಿಹಾರವೇ?” ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಮೂಲಸೌಕರ್ಯ ಕುಸಿತ, ಹೂಡಿಕೆ ನಿಧಾನಗತಿ ಮತ್ತು ಆಡಳಿತ ವೈಫಲ್ಯ ಉಂಟಾಗಿದೆ ಎಂದು ಆರೋಪಿಸಿದ ಅವರು, “ಜನರು ಸ್ಥಿರ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಮತ ನೀಡಿದ್ದಾರೆ, ಅಧಿಕಾರಕ್ಕಾಗಿ ಒಳಜಗಳಕ್ಕೆ ಅಲ್ಲ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ವೈಯಕ್ತಿಕ ಆಸ್ತಿಯಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಿ, ಸಮರ್ಥ ಆಡಳಿತ ನೀಡಬೇಕು; ಇಲ್ಲದಿದ್ದರೆ ವಿಫಲವಾಗಿದೆ ಎಂದು ಒಪ್ಪಿಕೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa