
ಜಬಲ್ಪುರ, 01 ಮೇ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಜಬಲ್ಪುರ ಸಮೀಪದ ಬಾರ್ಗಿ ಅಣೆಕಟ್ಟು ಯಲ್ಲಿ ಸಂಭವಿಸಿದ ಭೀಕರ ನೌಕೆ ದುರಂತದಲ್ಲಿ ಇದುವರೆಗೆ 9 ಶವಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನೂ ಸುಮಾರು 9 ಮಂದಿ ಕಾಣೆಯಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಗುರುವಾರ ಸಂಜೆ ನರ್ಮದಾ ನದಿ ಯಲ್ಲಿ ಪ್ರವಾಸಿಗರನ್ನು ಹೊತ್ತ ಕ್ರೂಸ್ ನೌಕೆ ಭಾರೀ ಬಿರುಗಾಳಿಯಿಂದ ಸಮತೋಲನ ಕಳೆದುಕೊಂಡು ಮುಳುಗಿತ್ತು. ದುರಂತದ ಸಮಯದಲ್ಲಿ 40–45 ಮಂದಿ ನೌಕೆಯಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ಆಡಳಿತದ ಮಾಹಿತಿಯಂತೆ, ಈಗಾಗಲೇ 24 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕರಾವಳಿಯಿಂದ ಸುಮಾರು 300 ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ.
ರಾತ್ರಿ ವೇಳೆ ಕತ್ತಲು ಮತ್ತು ಕೆಟ್ಟ ಹವಾಮಾನದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದರೂ, ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ , ರಾಷ್ಟ್ರೀಯ ಮಟ್ಟದ ರಕ್ಷಣಾ ತಂಡಗಳು ಹಾಗೂ ಭಾರತೀಯ ಸೇನೆ ಸಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಹೈದರಾಬಾದ್ನಿಂದ ವಿಶೇಷ ತಂಡ ಮತ್ತು ಹೆಲಿಕಾಪ್ಟರ್, ಕೋಲ್ಕತ್ತಾದಿಂದ ಅರೆಸೈನಿಕ ಪಡೆ ಈಗಾಗಲೇ ಸ್ಥಳಕ್ಕಾಗಮಿಸಿದೆ.
ಸುಮಾರು 20 ಅಡಿ ಆಳದ ನೀರಿನಲ್ಲಿ ಸಿಲುಕಿರುವ ಕ್ರೂಸ್ ನೌಕೆಯನ್ನು ಹೊರತೆಗೆಯಲು ಹೈಡ್ರಾಲಿಕ್ ಯಂತ್ರಗಳು ಹಾಗೂ ಪೊಕ್ಲೇನ್ಗಳ ಸಹಾಯ ಪಡೆಯಲಾಗುತ್ತಿದೆ.
ಬೇಸಿಗೆಯ ಸಮಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾರ್ಗಿ ಅಣೆಕಟ್ಟಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ ಗುರುವಾರ ಸಂಜೆ ಹಠಾತ್ ಹವಾಮಾನ ಬದಲಾಗಿದ್ದು, ಗಾಳಿ-ಮಳೆಯ ತೀವ್ರತೆಗೆ ನೌಕೆ ನಿಯಂತ್ರಣ ತಪ್ಪಿ ಮುಳುಗಿದೆ.
ಮೃತರಲ್ಲಿ ಕೆಲವರನ್ನು ಗುರುತಿಸಲಾಗಿದ್ದು, ಉಳಿದವರ ಗುರುತಿಸುವ ಪ್ರಕ್ರಿಯೆ ಮುಂದುವರಿದಿದೆ. ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa