
ಬೆಂಗಳೂರು, 01 ಮೇ (ಹಿ.ಸ.) :
ಆ್ಯಂಕರ್ : ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ಗಳ ಬೆಲೆ ಏರಿಕೆ ಹಿನ್ನೆಲೆ, ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, “ವಿಧಾನಸಭಾ ಚುನಾವಣೆಗಳು ಮುಗಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೆ ಬೆಲೆಗಳನ್ನು ಹೆಚ್ಚಿಸಿದೆ. ಮೇ 1ರಂದು ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ಗಳ ಬೆಲೆ ₹993 ರಷ್ಟು ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ಬೆಲೆ ₹3,071.50ಕ್ಕೆ ತಲುಪಿದೆ. ಚುನಾವಣಾ ಅವಧಿಯಲ್ಲಿ ಉದ್ದೇಶಪೂರ್ವಕವಾಗಿ ಇಂತಹ ಏರಿಕೆಗಳನ್ನು ತಡೆಹಿಡಿದು, ನಂತರ ಜನರ ಮೇಲೆ ಹೊರೆ ಹಾಕಲಾಗಿದೆ,” ಎಂದು ಆರೋಪಿಸಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ಆರು ಬಾರಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಿರುವ ಸಿದ್ದರಾಮಯ್ಯ, “ಒಟ್ಟು ₹1,518 ರಷ್ಟು ಹೆಚ್ಚಳವಾಗಿದ್ದು, ಇದು ಆಡಳಿತವಲ್ಲ — ಸಂಘಟಿತ ಲೂಟಿ,” ಎಂದು ಕಿಡಿಕಾರಿದ್ದಾರೆ.
ಜಾಗತಿಕ ಪರಿಸ್ಥಿತಿಗಳನ್ನು ಉಲ್ಲೇಖಿಸಿ, “ಜಾಗತಿಕ ಪರಿಸ್ಥಿತಿ ಬದಲಾಗುವಾಗ ಭಾರತೀಯ ನಾಗರಿಕರನ್ನು ರಕ್ಷಿಸುವ ಬದಲು, ಕೇಂದ್ರ ಸರ್ಕಾರವೇ ಅವರ ಮೇಲೆ ಹೊರೆ ಹಾಕುತ್ತಿದೆ. ಹೆಚ್ಚು ಪ್ರಚಾರಗೊಂಡ ವಿದೇಶಾಂಗ ನೀತಿ ಆರ್ಥಿಕತೆಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ,” ಎಂದು ಅವರು ಟೀಕಿಸಿದ್ದಾರೆ.
ಈ ಬೆಲೆ ಏರಿಕೆಯಿಂದ ಕೇವಲ ವ್ಯವಹಾರಗಳಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ಹೊರೆ ಆಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. “ಹೋಟೆಲ್ಗಳು, ರೆಸ್ಟೋರೆಂಟ್ಗಳು, ಸಣ್ಣ ವ್ಯಾಪಾರಿಗಳು ಬೆಲೆಗಳನ್ನು ಹೆಚ್ಚಿಸಲು ಮುಂದಾಗುತ್ತಾರೆ. ಇದರಿಂದ ಒಂದು ಕಪ್ ಚಹಾದಿಂದ ಸರಳ ಊಟದವರೆಗೆ ಎಲ್ಲವೂ ದುಬಾರಿಯಾಗುತ್ತದೆ. ನಗರ ಕಾರ್ಮಿಕ ವರ್ಗ, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಹೆಚ್ಚು ತೊಂದರೆ ಅನುಭವಿಸಲಿದ್ದಾರೆ,” ಎಂದು ಹೇಳಿದ್ದಾರೆ.
ಕಾರ್ಮಿಕ ದಿನದ ಹಿನ್ನೆಲೆ ಈ ಏರಿಕೆಯನ್ನು ಉಲ್ಲೇಖಿಸಿದ ಸಿಎಂ, “ಕಾರ್ಮಿಕರಿಗೆ ಇದು ಕೇಂದ್ರ ಸರ್ಕಾರದ ‘ಉಡುಗೊರೆ’ — ಹೆಚ್ಚಿದ ವೆಚ್ಚ, ಕುಗ್ಗುತ್ತಿರುವ ಆದಾಯ ಮತ್ತು ಹೆಚ್ಚಿನ ಸಂಕಷ್ಟಗಳು,” ಎಂದು ವ್ಯಂಗ್ಯವಾಡಿದ್ದಾರೆ.
ಇದು ಆರಂಭ ಮಾತ್ರವಾಗಿದ್ದು, ಮುಂದೆಯೂ ಇಂತಹ ಏರಿಕೆಗಳು ಮುಂದುವರಿಯಬಹುದು ಎಂದು ಅವರು ಎಚ್ಚರಿಕೆ ನೀಡಿದ್ದು, “ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸಿ, ನಂತರ ಹೊರೆ ಹಾಕುವುದು — ಇದೇ ಮೋದಿ ಮಾದರಿ,” ಎಂದು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa