ಮುಖ್ಯಮಂತ್ರಿ ಬದಲಾವಣೆ ; ಇನ್ನೂ ಯಾವುದೇ ತೀರ್ಮಾನ ಇಲ್ಲ : ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ
ಕಲಬುರಗಿ, 01 ಮೇ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಮಾತನಾ
ಖರ್ಗೆ


ಕಲಬುರಗಿ, 01 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, “ಸಿಎಂ ಬದಲಾವಣೆ ವಿಚಾರವನ್ನು ನಾವು ಎಲ್ಲರೂ ಸೇರಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಪದೇ ಪದೇ ಬದಲಾವಣೆ ಬಗ್ಗೆ ಕೇಳುವುದರಿಂದ ನಾನು ಏನು ಹೇಳಲಿ? ನಾನು ಒಂದು ಹೇಳುತ್ತೇನೆ, ನೀವು ಮತ್ತೊಂದು ರೀತಿಯಲ್ಲಿ ಪ್ರಸಾರ ಮಾಡುತ್ತೀರಿ. ಆದ್ದರಿಂದ ಯಾವುದೇ ಊಹಾಪೋಹ ಮಾಡಬೇಡಿ,” ಎಂದು ಹೇಳಿದರು.

ಪಕ್ಷದ ಹೈಕಮಾಂಡ್ ಕುರಿತು ಸ್ಪಷ್ಟನೆ ನೀಡಿದ ಖರ್ಗೆ, “ಹೈಕಮಾಂಡ್ ಅಂದರೆ ಒಬ್ಬರ ನಿರ್ಧಾರವಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ನಾವು ಎಲ್ಲರೂ ಸೇರಿ ವಿಚಾರಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಹೈಕಮಾಂಡ್ ಅಂದ್ರೆ ತಪ್ಪಾಗಿ ಅರ್ಥೈಸಬೇಡಿ,” ಎಂದರು.

“ಸಿಎಂ ಬದಲಾವಣೆ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸಮಯ ನಿಗದಿಯಾಗದೇ ನಾನು ಹೇಗೆ ಹೇಳಲಿ? ಬದಲಾವಣೆ ಆಗುತ್ತದೆಯೋ ಇಲ್ಲವೋ ಎಂಬುದನ್ನೂ ಈಗಲೇ ಹೇಳಲು ಸಾಧ್ಯವಿಲ್ಲ. ಸಮಯ ಬಂದಾಗ ನಾವು ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ,” ಎಂದು ಅವರು ತಿಳಿಸಿದರು.

ಇದೇ ವೇಳೆ, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅದರ ಪರಿಣಾಮಗಳನ್ನು ಸಮಗ್ರವಾಗಿ ಚರ್ಚಿಸಲಾಗುತ್ತದೆ. ಪಕ್ಷದ ಹಿತ ಹಾಗೂ ರಾಜ್ಯದ ಹಿತದೃಷ್ಟಿಯಿಂದಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಖರ್ಗೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande