ರಸ್ತೆ ಗುಂಡಿ ಆಪತ್ತು ; ಜನರ ಜೀವಕ್ಕಿಲ್ಲ ಬೆಲೆ
ವಿಜಯಪುರ, 01 ಮೇ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಬಹುತೇಕ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ನೇರ ಅಪಾಯ ಉಂಟು ಮಾಡುತ್ತಿದೆ. ಸಮರ್ಪಕ ನಿರ್ವಹಣೆ ಇಲ್ಲದ ರಸ್ತೆಗಳು ಈಗ ಅಪಘಾತಗಳಿಗೆ ಕಾರಣವಾಗುತ್ತಿದ್ದು
ರಸ್ತೆ ಗುಂಡಿ ಆಪತ್ತು ; ಜನರ ಜೀವಕ್ಕಿಲ್ಲ ಬೆಲೆ


ವಿಜಯಪುರ, 01 ಮೇ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಬಹುತೇಕ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ನೇರ ಅಪಾಯ ಉಂಟು ಮಾಡುತ್ತಿದೆ. ಸಮರ್ಪಕ ನಿರ್ವಹಣೆ ಇಲ್ಲದ ರಸ್ತೆಗಳು ಈಗ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಿಗ್ಗೆ ಮಾರುಕಟ್ಟೆಯ ಪ್ರಮುಖ ರಸ್ತೆಯಲ್ಲಿ ಉಂಟಾದ ಆಳವಾದ ಗುಂಡಿಗೆ ಟಂಟಂ ವಾಹನ ಸಿಲುಕಿದ ಘಟನೆ ಜನರನ್ನು ಆತಂಕಕ್ಕೀಡು ಮಾಡಿದೆ. ವಾಹನದ ಚಾಲಕನ ನಿಯಂತ್ರಣ ತಪ್ಪಿ ವಾಹನ ಗುಂಡಿಯೊಳಗೆ ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಆದರೆ ಈ ಘಟನೆ ಸಾರ್ವಜನಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಸ್ಥಳೀಯರು ಆರೋಪಿಸುವಂತೆ, ಹಲವು ತಿಂಗಳುಗಳಿಂದ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಗಾಲದಲ್ಲಿ ಈ ಗುಂಡಿಗಳು ನೀರಿನಿಂದ ತುಂಬಿ ಕಾಣಿಸದೇ ಇರುವುದರಿಂದ ಅಪಘಾತಗಳ ಸಂಭವ ಹೆಚ್ಚಾಗಿದೆ. ದಿನ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಆತಂಕದ ನಡುವೆಯೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ನಡೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು, ಗುಂಡಿಗಳನ್ನು ಮುಚ್ಚಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ಘಟನೆ ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ.

ಈ ಸಂಬಂಧ ಸಾರ್ವಜನಿಕರು ಶೀಘ್ರದಲ್ಲೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವುದು ಅಧಿಕಾರಿಗಳ ಮೊದಲ ಕರ್ತವ್ಯವಾಗಿದ್ದು, ಇನ್ನೂ ವಿಳಂಬ ಮಾಡದೇ ಸಮಸ್ಯೆ ಪರಿಹರಿಸಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande