
ಲೇಹ್, 01 ಮೇ (ಹಿ.ಸ.) :
ಆ್ಯಂಕರ್ : ಬುದ್ಧ ಪೂರ್ಣಿಮೆಯ ಅಂಗವಾಗಿ ಲಡಾಖ್ನಲ್ಲಿ ಭಗವಾನ್ ಗೌತಮ ಬುದ್ಧ ಅವರ ಪವಿತ್ರ ಅವಶೇಷಗಳ ಮೊದಲ ರಾಷ್ಟ್ರೀಯ ಪ್ರದರ್ಶನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 75 ವರ್ಷಗಳ ಬಳಿಕ ಲಡಾಖ್ನಲ್ಲಿ ಈ ಅವಶೇಷಗಳ ಆಗಮನ ಐತಿಹಾಸಿಕ ಕ್ಷಣವಾಗಿದ್ದು, ಇದು ಮಾನವಕುಲಕ್ಕೆ ಶಾಂತಿ, ಸಹಬಾಳ್ವೆ ಹಾಗೂ ಮಧ್ಯಮ ಮಾರ್ಗದ ಮಹತ್ವವನ್ನು ಮರುಸ್ಮರಿಸುತ್ತದೆ ಎಂದು ಹೇಳಿದರು.
ಭಾರತೀಯ ನಾಗರಿಕತೆ ಸಾವಿರಾರು ವರ್ಷಗಳಿಂದ ಜ್ಞಾನ ಮತ್ತು ಸಹಾನುಭೂತಿಯ ಮೌಲ್ಯಗಳ ಮೇಲೆ ನಿರ್ಮಾಣವಾಗಿದ್ದು, ಇಂದಿನ ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಬುದ್ಧನ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬುದ್ಧನ ಜೀವನದ ವಿಶೇಷತೆಯನ್ನು ಉಲ್ಲೇಖಿಸಿದ ಅಮಿತ್ ಶಾ, ಕ್ರಿ.ಪೂ. 563ರಲ್ಲಿ ಲುಂಬಿನಿಯಲ್ಲಿ ಜನಿಸಿದ ಸಿದ್ಧಾರ್ಥರು ಜ್ಞಾನೋದಯ ಪಡೆದ ಬಳಿಕ ತಥಾಗತ ಬುದ್ಧರಾದರು ಮತ್ತು 80ನೇ ವಯಸ್ಸಿನಲ್ಲಿ ಕುಶಿನಗರದಲ್ಲಿ ಮಹಾಪರಿನಿರ್ವಾಣ ಹೊಂದಿದರು ಎಂದು ಹೇಳಿದರು. ಅವರ ಜನನ, ಜ್ಞಾನೋದಯ ಮತ್ತು ನಿರ್ವಾಣ ಒಂದೇ ದಿನ ಸಂಭವಿಸಿದ ಅಪರೂಪದ ಸಂಗತಿ ಬೌದ್ಧ ಧರ್ಮದ ಮಹತ್ವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಲಡಾಖ್ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಶತಮಾನಗಳಿಂದ ಇಲ್ಲಿ ಬುದ್ಧನ ಬೋಧನೆಗಳನ್ನು ಸಂರಕ್ಷಿಸಿ ಹರಡಲಾಗಿದೆ. ದಲೈ ಲಾಮಾ ಅವರು ಈ ಪ್ರದೇಶವನ್ನು “ಬೌದ್ಧ ಸಂಸ್ಕೃತಿ ಮತ್ತು ಸಹಾನುಭೂತಿಯ ಜೀವಂತ ಪ್ರಯೋಗಾಲಯ” ಎಂದು ವರ್ಣಿಸಿರುವುದನ್ನು ಅವರು ಸ್ಮರಿಸಿದರು.
ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಸಂಘರ್ಷ ಮತ್ತು ಅಸ್ಥಿರತೆ ಹೆಚ್ಚುತ್ತಿರುವ ಹಿನ್ನೆಲೆ, ನ್ಯಿಂಗ್ಮಾ, ಕಾಗ್ಯು, ಶಾಕ್ಯ ಮತ್ತು ಗೆಲುಗ್ ಸಂಪ್ರದಾಯಗಳು ಸಾರುವ ‘ವಾಸ್ತವವನ್ನು ಹಾಗೆಯೇ ನೋಡುವುದು’ ಎಂಬ ಬೋಧನೆಗಳು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿವೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ, ಲಡಾಖ್ ಇಡೀ ಜಗತ್ತಿಗೆ ಅಹಿಂಸೆಯ ಮಾರ್ಗವನ್ನು ತೋರಿಸುವ ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮವು ಜಾಗತಿಕ ಶಾಂತಿಯ ಸಂದೇಶವನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಲಿದೆ ಎಂದು ಅವರು ಹೇಳಿದರು.
ಅವಶೇಷಗಳ ಸಾರ್ವಜನಿಕ ದರ್ಶನ:
ಪವಿತ್ರ ಅವಶೇಷಗಳನ್ನು ಮೇ 1ರಿಂದ ಮೇ 10ರವರೆಗೆ ಲಡಾಖ್ನ ಝಿವೆತ್ಸಲ್ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ. ಮೇ 11–12ರಂದು ಜನ್ಸ್ಕಾರ್ ಮತ್ತು ಮೇ 13–14ರಂದು ಲೇಹ್ ಧರ್ಮ ಕೇಂದ್ರದಲ್ಲಿ ಪ್ರದರ್ಶನ ನಡೆಯಲಿದೆ. ಮೇ 15ರಂದು ಅವಶೇಷಗಳನ್ನು ನವದೆಹಲಿಗೆ ಹಿಂತಿರುಗಿಸಲಾಗುತ್ತದೆ.
ಈ ಅವಶೇಷಗಳು ಕಪಿಲವಸ್ತುವಿನ ಪಿಪರ್ಹವಾ ಸ್ತೂಪಕ್ಕೆ ಸಂಬಂಧಿಸಿದವು ಎಂದು ನಂಬಲಾಗಿದ್ದು, 1898ರಲ್ಲಿ ಬ್ರಿಟಿಷ್ ಅಧಿಕಾರಿ ವಿಲಿಯಂ ಕ್ಲಾಕ್ಸ್ಟನ್ ಪೆಪ್ಪೆ ಅವರು ಅವುಗಳನ್ನು ಪತ್ತೆಹಚ್ಚಿದ್ದರು. ಇವುಗಳಲ್ಲಿ ಬುದ್ಧನ ಚಿತಾಭಸ್ಮದ ಭಾಗಗಳಿವೆ ಎಂದು ಭಕ್ತರು ನಂಬುತ್ತಾರೆ.
ಪ್ರಸ್ತುತ ಈ ಪವಿತ್ರ ಅವಶೇಷಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದ್ದು, ಇತ್ತೀಚಿನವರೆಗೂ ಮುಖ್ಯವಾಗಿ ವಿದೇಶಗಳಲ್ಲಿ ಮಾತ್ರ ಪ್ರದರ್ಶನಕ್ಕೆ ಕೊಂಡೊಯ್ಯಲಾಗುತ್ತಿತ್ತು. ಈಗ ಭಾರತದಲ್ಲಿಯೇ ಇವುಗಳ ಪ್ರದರ್ಶನವು ಮಹತ್ವದ ಬೆಳವಣಿಗೆಯಾಗಿ ಕಾಣಲಾಗುತ್ತಿದೆ.
ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಸುಮಾರು 15 ರಾಷ್ಟ್ರಗಳ ರಾಯಭಾರಿಗಳು ಈ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಇದರಿಂದ ಲಡಾಖ್ಗೆ ಜಾಗತಿಕ ಮಟ್ಟದಲ್ಲಿ ಆಧ್ಯಾತ್ಮಿಕ ಮತ್ತು ಪ್ರವಾಸೋದ್ಯಮ ಮಹತ್ವ ಹೆಚ್ಚುವ ಸಾಧ್ಯತೆ ಇದೆ.
ಕಾರ್ಯಕ್ರಮವು ಲೇಹ್ನ ಝಿವೆತ್ಸಲ್ ಮೈದಾನದಲ್ಲಿ ಭಕ್ತಿಭಾವದ ವಾತಾವರಣದಲ್ಲಿ ನಡೆಯಿತು. ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ, ಲಡಾಖ್ ಬೌದ್ಧ ಸಂಘದ ಅಧ್ಯಕ್ಷ ತ್ಸೆರಿಂಗ್ ದೋರ್ಜೆ ಲಾಕ್ರೂಕ್, ಲಡಾಖ್ ಗೋಂಪಾ ಸಂಘದ ಅಧ್ಯಕ್ಷ ದೋರ್ಜೆ ಸ್ಟ್ಯಾನ್ಜಿನ್, ರಿನ್ಪೋಚೆ ಕ್ಯಾಬ್ಜೆ ದ್ರುಕ್ಪಾ ತುಕ್ಸೆ ಸೇರಿದಂತೆ ಅನೇಕ ಧಾರ್ಮಿಕ ನಾಯಕರು ಮತ್ತು ಆಧ್ಯಾತ್ಮಿಕ ಗುರುಗಳು ಭಾಗವಹಿಸಿದರು. ಲಾಮಾ ವಾದನ, ದೀಪ ಪ್ರಜ್ವಲನೆ, ತ್ಸೋಗ್ ಅರ್ಪಣೆ ಹಾಗೂ ಪವಿತ್ರ ಅವಶೇಷಗಳ ದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಟಿಬೆಟಿಯನ್ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜನಪದ ನೃತ್ಯಗಳು ಸ್ಥಳೀಯ ಪರಂಪರೆಯನ್ನು ಪ್ರತಿಬಿಂಬಿಸಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa