
ಬೆಂಗಳೂರು, 01 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿ ಪಕ್ಷದ ನಾಯಕ ಆರ್.ಅಶೋಕ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರ್ಕಾರದ ನೀತಿಗಳ ಬಗ್ಗೆ ಕಿಡಿಕಾರಿದ್ದಾರೆ.
ತಮ್ಮ ಹೇಳಿಕೆಯಲ್ಲಿ, “ಜಿಬಿಎ ಚುನಾವಣೆ ನಡೆಸಲು ಹಣವಿಲ್ಲವೆಂದು ಸುಪ್ರೀಂ ಕೋರ್ಟ್ ಮುಂದೆ ಕಾರಣ ಹೇಳಿದ ರಾಜ್ಯ ಸರ್ಕಾರ, ಇದೀಗ ಮತಬ್ಯಾಂಕ್ ರಾಜಕಾರಣಕ್ಕಾಗಿ ₹600 ಕೋಟಿ ವೆಚ್ಚಕ್ಕೆ ಮುಂದಾಗಿದೆ” ಎಂದು ಆರೋಪಿಸಿದ್ದಾರೆ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಮರ್ಪಕ ಸಂಬಳ ನೀಡಲಾಗುತ್ತಿಲ್ಲ, ಗ್ರಂಥಾಲಯ ಸಿಬ್ಬಂದಿ, ನರೇಗಾ ಕಾರ್ಮಿಕರು ಮತ್ತು ಉಪನ್ಯಾಸಕರಿಗೆ ವೇತನ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ರೈತರು ಸರ್ಕಾರಿ ಕಚೇರಿಗಳ ಆವರಣದಲ್ಲಿ ವಿಷ ಸೇವಿಸುವ ಮಟ್ಟಕ್ಕೆ ತಲುಪಿದ್ದಾರೆ, ಉದ್ಯೋಗಾಕಾಂಕ್ಷಿಗಳು ನೇಮಕಾತಿಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿರುವ ಅಶೋಕ್, “ಜನರ ತೆರಿಗೆ ಹಣವನ್ನು ಚುನಾವಣಾ ಲಾಭಕ್ಕಾಗಿ ಬಳಸುವುದು ನೈತಿಕತೆಯಿಲ್ಲದ ನಡೆ” ಎಂದು ಟೀಕಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa