ಕೊಡಗು ಅರಣ್ಯ ದಂಧೆ ಬಯಲು ; ಮಾಫಿಯಾ ಜೊತೆಗೆ ಅಧಿಕಾರಿಗಳ ಶಾಮೀಲು
ಮಡಿಕೇರಿ, 09 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಕುಶಾಲನಗರ ಅರಣ್ಯ ಶ್ರೇಣಿಗಳಲ್ಲಿ ನೂರಾರು ತೇಗ ಮರಗಳನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡಿದ ಗಂಭೀರ ಅಕ್ರಮ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಮರದ ಮಾಫಿಯಾ ಜೊತೆಗೆ ಕೈಜೋಡಿಸಿರುವ ಆರೋಪಗಳು ಕೇಳಿ
Forest


ಮಡಿಕೇರಿ, 09 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಕುಶಾಲನಗರ ಅರಣ್ಯ ಶ್ರೇಣಿಗಳಲ್ಲಿ ನೂರಾರು ತೇಗ ಮರಗಳನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡಿದ ಗಂಭೀರ ಅಕ್ರಮ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಮರದ ಮಾಫಿಯಾ ಜೊತೆಗೆ ಕೈಜೋಡಿಸಿರುವ ಆರೋಪಗಳು ಕೇಳಿ ಬಂದಿವೆ.

ಮಡಿಕೇರಿ ಅರಣ್ಯ ವಿಭಾಗದ ಸಂರಕ್ಷಕಿ ಸೋನಾಲ್ ವೃಶಿನಿ ಅವರ ಆದೇಶದ ಮೇರೆಗೆ ನಡೆದ ತನಿಖೆಯಲ್ಲಿ, ಅಕ್ರಮ ಕಡಿತದ ಹಿಂದೆ ಇಲಾಖೆಯೊಳಗಿನವರೇ ಭಾಗಿಯಾಗಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಆದಾಗ್ಯೂ, ಪ್ರಕರಣದಲ್ಲಿ ಒಬ್ಬ ತಾತ್ಕಾಲಿಕ ಸಿಬ್ಬಂದಿಯನ್ನು ಮಾತ್ರ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಪರಿಸರವಾದಿ ಜೋಸೆಫ್ ಹೂವರ ಆರೋಪಿಸಿದ್ದಾರೆ.

ಅಕ್ರಮವಾಗಿ ಕಡಿದ ತೇಗ ಮರಗಳನ್ನು ಕುಶಾಲನಗರ, ಪೆರಿಯಪಟ್ಟಣ ಹಾಗೂ ಹುಣಸೂರು ಭಾಗಗಳ ಗಿರಣಿಗಳಿಗೆ ಸಾಗಿಸಲಾಗಿದ್ದು, ಈ ಕಾರ್ಯಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನುಬದ್ಧತೆ ನೀಡಲು ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ಸಂಬಂಧ ಉಪ ವಲಯ ಅರಣ್ಯಾಧಿಕಾರಿ ಉಳ್ಳಾಸ್ ಪ್ರಕಾಶ್ ಮಧರ್, ಅರಣ್ಯ ಕಾವಲುಗಾರ ಚಂದ್ರಶೇಖರ್, ಅರಣ್ಯ ವೀಕ್ಷಕ ಆಂಥೋನಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇವರಲ್ಲಿ ಕೆಲವರಿಗೆ ಲೋಕಾಯುಕ್ತ ಪ್ರಕರಣಗಳೂ ಇದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ, ಆರ್ಎಫ್ಒ ಶೈಲೇಂದ್ರ ಮತ್ತು ಎಸಿಎಫ್ ಗೋಪಾಲ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದರೂ, ಹಿರಿಯ ಅಧಿಕಾರಿಗಳು ರಾಜಕೀಯ ಒತ್ತಡದ ಕಾರಣದಿಂದ ಅಮಾನತು ಆದೇಶ ಹೊರಡಿಸಲು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಅಕ್ರಮ ಕಡಿತ ಯಾದವನಡು ಮೀಸಲು ಅರಣ್ಯ, ಉರುಡುವೆ ಸಂರಕ್ಷಿತ ಅರಣ್ಯ ಹಾಗೂ ಅತ್ತೂರು ಹಿನ್ನೀರು ಪ್ರದೇಶಗಳಲ್ಲಿ ನಡೆದಿದ್ದು, ಈ ಎಲ್ಲಾ ಪ್ರದೇಶಗಳು ಎಸಿಎಫ್ ಗೋಪಾಲ್ ಅವರ ಉಪವಿಭಾಗಕ್ಕೆ ಸೇರಿವೆ. ಇದರೊಂದಿಗೆ ಕೆಲವು ಪ್ರಮುಖ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಅಳಿಸಲಾಗಿದೆ ಎಂಬ ಗಂಭೀರ ಆರೋಪವೂ ವ್ಯಕ್ತವಾಗಿದೆ.

ಇನ್ನೊಂದೆಡೆ, ಅಕ್ರಮ ಕಡಿತ ತಡೆಯಲು ಮುಂದಾದ ಪ್ರಾಮಾಣಿಕ ಡಿಸಿಎಫ್ ಭಾಸ್ಕರ್ ಅವರನ್ನು ವರ್ಗಾಯಿಸಲಾಗಿದೆ ಎಂಬ ವಿಚಾರವೂ ಮತ್ತೆ ಚರ್ಚೆಗೆ ಬಂದಿದೆ.

ಪ್ರಕರಣಕ್ಕೆ ರಾಜಕೀಯ ಸ್ಪರ್ಶವೂ ಇದ್ದು, ಮಡಿಕೇರಿಯಲ್ಲಿರುವ ರಾಜಕಾರಣಿಯೊಬ್ಬರ ಸ್ನೇಹಿತನ ಮನೆಗೆ ತೇಗ ಮರಗಳನ್ನು ಸರಬರಾಜು ಮಾಡಲಾಗಿದೆ ಎಂದು ವರದಿಯಾಗಿದೆ. ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ರಕ್ಷಣೆ ಆರೋಪವೂ ಕೇಳಿ ಬಂದಿದೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮಕ್ಕೆ ಸೂಚನೆ ನೀಡಿದರೂ, ಪ್ರಮುಖ ಆರೋಪಿಗಳ ವಿರುದ್ಧ ಇನ್ನೂ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಹುಟ್ಟಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಆದೇಶಿಸಿ, ಅರಣ್ಯ ದಂಧೆಯ ಹಿಂದೆ ಇರುವ ಸಂಪೂರ್ಣ ಜಾಲವನ್ನು ಬಯಲಿಗೆಳೆಯಬೇಕು ಎಂದು ಜೋಸೆಫ್ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande