
ವಿಜಯಪುರ, 09 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಂಬಂಧಿಕರ ಭೇಟಿಗೆ ತೆರಳಿದ್ದ ವ್ಯಕ್ತಿಯೋರ್ವರು ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದ ನಿವಾಸಿ ಗೌಸ ಹುಸೇನ ಸಾಬ ಲೋಕಾಪುರ (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ಗೌಸ ಲೋಕಾಪುರ ಅವರು ಸಿಂದಗಿಯಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ವಿಜಯಪುರದಿಂದ ಸಿಂದಗಿ ಕಡೆಗೆ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಿದ್ದರು. ನಂತರ ಅದೇ ಬಸ್ ವಿಜಯಪುರಕ್ಕೆ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಚಿಕ್ಕ ಸಿಂದಗಿ ಸಮೀಪದಲ್ಲಿ ಟಿಕೆಟ್ ನೀಡಲು ಕಂಡಕ್ಟರ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದು ಗಮನಕ್ಕೆ ಬಂದಿದೆ.
ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ತಿಳಿದು ಬಂದಿದ್ದು, ತಕ್ಷಣವೇ ಬಸ್ ಅನ್ನು ಸಿಂದಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬಳಿಕ ಪೊಲೀಸರ ಪರಿಶೀಲನೆಯ ವೇಳೆ ಮೃತರು ಸಿಂದಗಿಯ ಬೇಕಿನಾಳ ಗ್ರಾಮದ ಕುಟುಂಬದ ಸಂಬಂಧಿಕರು ಎಂಬುದು ತಿಳಿದುಬಂದಿದ್ದು, ಸಂಬಂಧಿಕರನ್ನು ಸಂಪರ್ಕಿಸಲಾಯಿತು.
ಕುಟುಂಬಸ್ಥರು ಆಗಮಿಸಿ ಮೃತರು ತಮ್ಮ ಕುಟುಂಬದವರೇ ಎಂದು ಗುರುತಿಸಿದ್ದು, ಆಕಸ್ಮಿಕ ಸಾವು ಎಂದು ತಿಳಿದುಬಂದಿದೆ. ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande