ಕಾಲುಬಾಯಿ ರೋಗ ಲಸಿಕೆ
ಕೊಪ್ಪಳ, 09 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿ ಯಾವುದೇ ಜಾನುವಾರು ಕಾಲುಬಾಯಿ ರೋಗ ಲಸಿಕೆಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 9ನೇ ಸುತ್ತಿನ ಕಾಲು-ಬಾಯಿ ರೋಗ ನಿಯಂತ್ರ
Foot-and-mouth disease vaccine


Foot-and-mouth disease vaccine


ಕೊಪ್ಪಳ, 09 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಯಾವುದೇ ಜಾನುವಾರು ಕಾಲುಬಾಯಿ ರೋಗ ಲಸಿಕೆಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

9ನೇ ಸುತ್ತಿನ ಕಾಲು-ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಅನುಷ್ಠಾನದ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿ 9ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ಏಪ್ರಿಲ್ 23 ರಿಂದ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ಲಸಿಕಾ ತಂಡದ ಮುಖ್ಯಸ್ಥರು ಹಾಗೂ ಎಲ್ಲಾ ಲಸಿಕಾದಾರರು ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾದಲ್ಲಿ, ಅದರ ನಿಯಂತ್ರಣಕ್ಕಾಗಿ ಅವಶ್ಯವಿರುವ ಔಷಧಿಗಳನ್ನು ದಾಸ್ತಾನಿಕರಿಸಲು ಅಗತ್ಯ ಕ್ರಮ ಕೈಗೊಳ್ಳಿ. ಜಾನುವಾರುಗಳಲ್ಲಿ ರೋಗನಿರೋದಕ ಶಕ್ತಿ ವೃದ್ಧಿ ಬಗ್ಗೆ ನಿಗಾ ಇಡಲು ಲಸಿಕಾ ಪೂರ್ವ (0 ದಿವಸ) ಮತ್ತು ನಂತರ (28 ದಿವಸ) ಸೀರಂ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಕ್ಕೆ ಸಲ್ಲಿಸಬೇಕು. ಲಸಿಕಾ ಕಾರ್ಯಕ್ರಮದ ದೈನಂದಿನ ಲಸಿಕಾ ವರದಿಯನ್ನು ಆನ್ಲೈನ್ ನಲ್ಲಿ ಅದೇ ದಿನ ಭಾರತ ಪಶುಧನ ತಂತ್ರಾಂಶದಲ್ಲಿ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ವ್ಯಾಪಕ ಪ್ರಚಾರಕ್ಕೆ ಕೈಗೊಳ್ಳಿ: ಆಕಾಶವಾಣಿ ಬಾನುಲಿ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ಕುರಿತಂತೆ ಪ್ರಚಾರಕೈಗೊಳ್ಳಬೇಕು. ಲಸಿಕಾ ಅಭಿಯಾನದ ಪ್ರಚಾರಕ್ಕೆ ಕರ ಪತ್ರಗಳನ್ನು ಹಂಚಬೇಕು. ಬ್ಯಾನರಗಳನ್ನು ಪ್ರದರ್ಶಿಸಬೇಕು. ಸ್ಥಳೀಯ ದಿನ ಪತ್ರಿಕೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಗ್ರಾಮದ ಗ್ರಾಮ ಪಂಚಾಯತಿಗೆ ಲಸಿಕೆಯ 2 ದಿನದ ಮುಂಚಿತವಾಗಿ ತಿಳಿಸಿ ಗ್ರಾಮ ಪಂಚಾಯತ್ ವತಿಯಿಂದ ಡಂಗುರ ಅಥವಾ ಟಾಂ ಟಾಂ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಆಯಾ ತಾಲ್ಲೂಕಿನ ವಿಸ್ತರಣಾ ಅಧಿಕಾರಿಗಳು ಎಂ.ಪಿ.ಸಿ.ಎಸ್, ರೈತ ಸಂಪರ್ಕ ಕೇಂದ್ರ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಕಾಲು ಬಾಯಿ ಲಸಿಕಾ ಅಭಿಯಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಈ ಲಸಿಕಾ ಕಾರ್ಯಕ್ರಮದ ಉದ್ಘಾಟನೆಯು ಎಲ್ಲಾ ಕಡೆಗಳಲ್ಲೂ ಅಚ್ಚುಕಟ್ಟಾಗಿ ನಡೆಯಬೇಕು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಸಂಸದರು, ಮಾನ್ಯ ಸ್ಥಳೀಯ ವಿಧಾನ ಸಭಾ ಶಾಸಕರುಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಉದ್ಘಾಟನೆ ನೆರವೇರಿಸುವಂತೆ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಪಿ.ಎಂ.ಮಲ್ಲಯ್ಯ ಅವರು ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿ 9ನೇ ಸುತ್ತಿನ ಕಾಲುಬಾಯಿ ನಿರೋಧಕ ಲಸಿಕಾ ಅಭಿಯಾನಕ್ಕಾಗಿ ಕೈಗೊಂಡ ಅಗತ್ಯ ಪೂರ್ವಸಿದ್ದತೆಗಳ ಕುರಿತು ಮಾಹಿತಿ ನೀಡಿ, ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ದನ ಮತ್ತು ಎಮ್ಮೆ ಸೇರಿ ಒಟ್ಟು 2,38,376 ಜಾನುವಾರುಗಳಿವೆ. ಈ ಅಭಿಯಾನವು ಏ. 23 ರಿಂದ ಮೇ 22ರ ವರೆಗೆ ಒಟ್ಟು 30 ದಿನ ಹಮ್ಮಿಕೊಳ್ಳಲಾಗಿದೆ ಎಂದರು.

ಲಸಿಕೆ, ಸೀರಿಂಜ್ & ನೀಡಲ್ಸ್ಗಳ ಶೇಖರಣೆ ಹಾಗೂ ಲಸಿಕಾದಾರರು: 9ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಅವಶ್ಯವಿರುವ 2.55 ಲಕ್ಷ ಡೋಸು ಲಸಿಕೆಯು ಈಗಾಗಲೆ ಆಯುಕ್ತಾಲಯದಿಂದ ಸ್ವೀಕೃತವಾಗಿದ್ದು, ಕಳೆದ ಸುತ್ತಿನ ಉಳಿಕೆ ಲಸಿಕೆಯು ಸೇರಿ ಒಟ್ಟು 2.62 ಲಕ್ಷ ಡೋಸು ಲಸಿಕೆಗಳನ್ನು ಶೇಖರಣೆಗಾಗಿ ಜಿಲ್ಲೆಯ 5 ವಾಕ್-ಇನ್ ಕೂಲರ್ ಮತ್ತು 29 ಐ.ಎಲ್.ಆರ್.ಗಳಲ್ಲಿ ಅಗತ್ಯ ಶೇಖರಣಾ ತಾಪಮಾನ ವ್ಯವಸ್ಥೆಯಡಿ ತಂಪು-ಸರಪಳಿಯಡಿ ಶೇಖರಿಸಲಾಗಿದೆ. ಅದೇ ರೀತಿ ಈಗಾಗಲೇ 3.16 ಲಕ್ಷ ಸೀರಿಂಜ್ ಹಾಗೂ ನೀಡಲ್ಸ್ಗಳು ಸರಬುರಾಜಾಗಿದ್ದು, ಲಭ್ಯ ಜಾನುವಾರುಗಳ ಸಂಖ್ಯೆಗಳಿಗನುಗುಣವಾಗಿ ಆಯಾ ತಾಲ್ಲೂಕುಗಳಿಗೆ ವಿತರಿಸಲಾಗಿರುತ್ತದೆ. ಈ ಲಸಿಕಾ ಕಾರ್ಯಕ್ರಮಕ್ಕಾಗಿ ಒಟ್ಟು 195 ಲಸಿಕಾದಾರರನ್ನು ಗುರುತಿಸಲಾಗಿದ್ದು, ಲಸಿಕಾದಾರರಿಗೆ ಆದೇಶ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಲಸಿಕಾ ಕಾರ್ಯಕ್ರಮದ ಶೆಡ್ಯೂಲ್ ಮತ್ತು ಮೈಕ್ರೋಪ್ಲಾನ್: ಇಲಾಖೆಯಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹಾಗೂ ಇಲಾಖೇತರ ಲಸಿಕೆದಾರರನ್ನು ಬಳಸಿಕೊಂಡು ಏ. 23 ರಿಂದ ಮೇ 22ರ ವರೆಗೆ ಒಟ್ಟು 30 ದಿನಗಳ ಅವಧಿಗೆ ದಿನಾಂಕವಾರು ಹಾಗೂ ಗ್ರ್ರಾಮವಾರು ಪೂರ್ಣ ವೇಳಾಪಟ್ಟಿಯನ್ನು ತಯಾರಿಸಿ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ 100 ರಿಂದ 120 ಜಾನುವಾರುಗಳಿಗೆ ಒಂದು ಬ್ಲಾಕ್ನಂತೆ ಗ್ರಾಮವಾರು ಬ್ಲಾಕ್ಗಳನ್ನು ರಚಿಸಿ ಮೈಕ್ರೋಪ್ಲಾನ್ನ್ನು ತಯಾರಿಸಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ಬಸಯ್ಯ ಸಾಲಿ, ಡಾ. ಪ್ರಕಾಶ ಚೂರಿ, ಡಾ. ಜಾಕೀರ ಹುಸೇನ್, ಡಾ. ಆನಂದ ದೇವರನಾವದಗಿ, ಡಾ. ಚನ್ನಬಸಪ್ಪ ಹಳ್ಳದ, ಡಾ. ವಿನೋದ ಕುಮಾರ ದಿವಟರ್, ಕೆಎಂಎಫ್ ಅಧಿಕಾರಿಗಳಾದ ಕಾಸಿಂಸಾಬ್, ಪಶುವೈದ್ಯಕೀಯ ಪರಿವೀಕ್ಷಕರಾದ ಮಹಮ್ಮದ ರಫಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande