
ವಿಜಯಪುರ, 09 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಮಾಜದ ಹರಿಕಾರ ಹಾಗೂ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಇದೇ ಏಪ್ರಿಲ್ 11ರಿಂದ 14ರವರೆಗೆ ವಿಜಯಪುರ ನಗರದಲ್ಲಿ “ಅಂಬೇಡ್ಕರ್ ಹಬ್ಬ–2026” ಕಾರ್ಯಕ್ರಮವನ್ನು ವಿವಿಧ ವೈಚಾರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ ಎಂದು ಖ್ಯಾತ ವೈದ್ಯ ಡಾ. ಬಾಬು ರಾಜೇಂದ್ರ ನಾಯಕ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಗ್ರಂಥವಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರ ಮನೆಮನೆಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ, ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಸಮಸ್ತ ಸಮಾಜದ ಹಬ್ಬವಾಗಿದೆ. ಬಸವಣ್ಣ, ಬುದ್ಧ ಹಾಗೂ ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳನ್ನು ಮೆಲುಕು ಹಾಕುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ 1939ರಲ್ಲಿ ವಿಜಯಪುರಕ್ಕೆ ಭೇಟಿ ನೀಡಿ ಇಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ಸಂವಿಧಾನದ ಮಹತ್ವವನ್ನು ಮಕ್ಕಳಿಗೆ ತಿಳಿಸುವುದು ಅಗತ್ಯವಾಗಿದ್ದು, ಅದರ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಎಂ.ಸಿ. ಮುಲ್ಲಾ ಮಾತನಾಡಿ, ಮಹಾನ್ ವ್ಯಕ್ತಿಗಳು ಸಮಸ್ತ ಸಮಾಜದ ಆಸ್ತಿ. ಅವರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವ ಪ್ರಯತ್ನ ನಡೆಯುವುದು ಕಳವಳಕಾರಿ ಸಂಗತಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ವೇಳಾಪಟ್ಟಿಯಂತೆ ಏಪ್ರಿಲ್ 11ರಂದು ಮಹಾತ್ಮಾ ಜ್ಯೋತಿಬಾ ಫುಲೆ ಅವರ 199ನೇ ಜಯಂತಿ ಆಚರಣೆ ಹಾಗೂ ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 12ರಂದು ಬಸವಣ್ಣನವರ ವೈಚಾರಿಕ ಚಿಂತನಗೋಷ್ಠಿ ನಡೆಯಲಿದ್ದು, ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೃತಿ ಲೋಕಾರ್ಪಣೆಗೊಳಿಸಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಏಪ್ರಿಲ್ 13ರಂದು “ನಾವು–ನಮ್ಮ ಸಂವಿಧಾನ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸಲಿದ್ದಾರೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.
ಏಪ್ರಿಲ್ 14ರಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ್ ಉದ್ಘಾಟಿಸಲಿದ್ದಾರೆ. ಶಾಸಕ ವಿಠ್ಠಲ್ ಕಟಕದೊಂಡ, ಮಾಜಿ ಶಾಸಕ ರಾಜು ಅಲಗೂರ್, ಮಹಾನಗರ ಪಾಲಿಕೆ ಮಹಾಪೌರ ಎಂ.ಎಸ್. ಕರಡಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಾಥ್ ಪೂಜಾರಿ, ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಫಯಾಜ್ ಕಲಾದಗಿ, ಬಾಲಾಜಿ ಕಾಂಬ್ಳೆ, ಮಹದೇವ ರಾವಜಿ, ಮಹದೇವ ಛಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande