
ಚಂಡೀಗಡ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಂಜಾಬ್ ರಾಜಕೀಯದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದ್ದು, ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ನ ಮಾಜಿ ರಾಜ್ಯಾಧ್ಯಕ್ಷ ನೌವಜೋತ್ ಸಿಂಗ್ ಸಿಧು ಅವರ ಪತ್ನಿ ಡಾ. ನವಜೋತ್ ಕೌರ್ ಸಿಧು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ.
ಸೋಮವಾರ ತಡರಾತ್ರಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ ಖಾತೆಯ ಮೂಲಕ ಅವರು ‘ಭಾರತೀಯ ರಾಷ್ಟ್ರವಾದಿ ಪಕ್ಷ’ ರಚನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಘೋಷಣೆ ಯಾವುದೇ ಭಾರೀ ಸಾರ್ವಜನಿಕ ಕಾರ್ಯಕ್ರಮವಿಲ್ಲದೆ ಸರಳವಾಗಿ ಪ್ರಕಟವಾಗಿರುವುದು ಗಮನಾರ್ಹವಾಗಿದೆ.
ಡಾ. ನವಜೋತ್ ಕೌರ್ ಸಿಧು ತಮ್ಮ ಹೇಳಿಕೆಯಲ್ಲಿ, ದೇಶದ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಸಮಗ್ರವಾಗಿ ಅವಲೋಕಿಸಿದ ನಂತರ, ರಾಷ್ಟ್ರೀಯ ಮಟ್ಟದಲ್ಲಿ ಹೊಸ ಪರ್ಯಾಯವನ್ನು ರೂಪಿಸುವ ಉದ್ದೇಶದಿಂದ ಈ ಪಕ್ಷವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. “ಜನರು ನಮ್ಮಿಂದ ನಿರೀಕ್ಷಿಸುವ ಸೇವೆಯನ್ನು ನಿಷ್ಠೆಯಿಂದ ನೀಡುವ ಉದ್ದೇಶ ನಮ್ಮದು” ಎಂದು ಅವರು ಹೇಳಿದ್ದಾರೆ.
ಪಕ್ಷದ ಮೂಲ ಧ್ಯೇಯಗಳಲ್ಲಿ ನ್ಯಾಯ, ಶಾಂತಿ, ಪ್ರೀತಿ ಮತ್ತು ಆತ್ಮೀಯ ಮೌಲ್ಯಗಳನ್ನು ಉತ್ತೇಜಿಸುವುದು ಸೇರಿದ್ದು, ಪಂಜಾಬ್ ರಾಜ್ಯವನ್ನು ಮತ್ತೆ “ಸುವರ್ಣ ರಾಜ್ಯ”ವಾಗಿ ರೂಪಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದ್ದಾರೆ. ಜನರಿಗಾಗಿ, ಜನರಿಂದ ಮತ್ತು ಜನರೇ ಆಡಳಿತ ನಡೆಸುವ ವ್ಯವಸ್ಥೆಯನ್ನು ಸ್ಥಾಪಿಸುವುದೇ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನವಜೋತ್ ಸಿಂಗ್ ಸಿಧು ಅವರು ಕ್ರಿಕೆಟ್ ವಿಕ್ಷಕ ವಿವರಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ, ಈ ಮಹತ್ವದ ಘೋಷಣೆಯ ವೇಳೆ ಅವರ ಉಪಸ್ಥಿತಿ ಇರಲಿಲ್ಲ ಎಂಬುದು ತಿಳಿದು ಬಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa