
ನವದೆಹಲಿ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ನಡುವೆಯೂ, ಟಾಟಾ ಸಮೂಹದ ಏರ್ ಇಂಡಿಯಾ ಹಾಗೂ ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳವಾರ ಒಟ್ಟು 32 ವಿಮಾನಗಳ ಕಾರ್ಯಾಚರಣೆಯನ್ನು ಮುಂದುವರಿಸಿವೆ.
ಭಾರತ ಮತ್ತು ಮಧ್ಯಪ್ರಾಚ್ಯ ದೇಶಗಳ ನಡುವೆ ಸಂಪರ್ಕ ಕಾಪಾಡುವ ಉದ್ದೇಶದಿಂದ ನಿಗದಿತ ಹಾಗೂ ಅನಿಯಮಿತ (ಚಾರ್ಟರ್) ಸೇವೆಗಳನ್ನೂ ಒಳಗೊಂಡಂತೆ ಈ ವಿಮಾನಗಳು ಸಂಚರಿಸುತ್ತಿವೆ ಎಂದು ಸಂಸ್ಥೆ ತಿಳಿಸಿದೆ. ಇವುಗಳಲ್ಲಿ 16 ವಿಮಾನಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಮತ್ತು ಅಲ್ಲಿಂದ ಕಾರ್ಯಾಚರಿಸಲಿದ್ದು, ಸಂಬಂಧಿತ ಭಾರತೀಯ ಹಾಗೂ ಯುಎಇ ನಿಯಂತ್ರಕ ಸಂಸ್ಥೆಗಳ ಅಗತ್ಯ ಅನುಮತಿಗಳನ್ನು ಪಡೆದಿವೆ.
ಇದೇ ಸಂದರ್ಭದಲ್ಲಿ, ದೇಶದ ಮತ್ತೊಂದು ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಕೂಡ ತನ್ನ ಆಯ್ದ ಸೇವೆಗಳನ್ನು ಮುಂದುವರಿಸಿದ್ದು, ಪರಿಸ್ಥಿತಿಗೆ ಅನುಗುಣವಾಗಿ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತಂದಿದೆ.
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಅಸ್ಥಿರತೆ ಹಿನ್ನೆಲೆ ವಿಮಾನ ಸಂಚಾರದಲ್ಲಿ ವ್ಯತ್ಯಯಗಳ ಸಂಭವ ಇರುವುದರಿಂದ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ಟಿಕೆಟ್ಗಳ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕು ಎಂದು ವಿಮಾನಯಾನ ಸಂಸ್ಥೆಗಳು ಸಲಹೆ ನೀಡಿವೆ. ಜೊತೆಗೆ, ಅಗತ್ಯವಿದ್ದಲ್ಲಿ ಮರುಬುಕಿಂಗ್ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ದುಬೈ, ಜೆದ್ದಾ ಮತ್ತು ಅಬುಧಾಬಿ ಸೇರಿದಂತೆ ಪ್ರಮುಖ ಗಮ್ಯಸ್ಥಾನಗಳಿಗೆ ತೆರಳುವ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳ ಸಾಧ್ಯತೆ ಇರುವುದಾಗಿ ತಿಳಿಸಲಾಗಿದ್ದು, ಅಂತಿಮ ಕಾರ್ಯಾಚರಣೆಗಳು ಸ್ಲಾಟ್ ಲಭ್ಯತೆ ಮತ್ತು ಭದ್ರತಾ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ.
ಪಶ್ಚಿಮ ಏಷ್ಯಾದಲ್ಲಿ ಮುಂದುವರಿಯುತ್ತಿರುವ ಬಿಕ್ಕಟ್ಟಿನ ನಡುವೆಯೂ ವಿಮಾನ ಸೇವೆಗಳನ್ನು ನಿರ್ವಹಿಸುವ ಮೂಲಕ ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa