ಐಪಿಎಲ್: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ಆರ್ಸಿಬಿ ಅಬ್ಬರ
ಬೆಂಗಳೂರು, 06 ಏಪ್ರಿಲ್ (ಹಿ.ಸ.): ಆ್ಯಂಕರ್: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ನಡೆದ ಐಪಿಎಲ್ 2026 ರ 11ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಅಭಿಮಾನಿಗಳ ನಿರೀಕ್ಷೆಯಂತೆ ಪ್ರದರ್ಶನ ನೀಡಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)
IPL


ಬೆಂಗಳೂರು, 06 ಏಪ್ರಿಲ್ (ಹಿ.ಸ.):

ಆ್ಯಂಕರ್:

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ನಡೆದ ಐಪಿಎಲ್ 2026 ರ 11ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಅಭಿಮಾನಿಗಳ ನಿರೀಕ್ಷೆಯಂತೆ ಪ್ರದರ್ಶನ ನೀಡಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 43 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸಿಎಸ್‌ಕೆ ತಂಡಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ ನೀಡಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡವು ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ, ನಂತರದ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 20 ಓವರ್‌ಗಳಲ್ಲಿ 250 ರನ್‌ಗಳ ಮಹತ್ತರ ಮೊತ್ತ ಕಲೆಹಾಕಿತು. ತಂಡದ ಇನ್ನಿಂಗ್ಸ್‌ನಲ್ಲಿ ಒಟ್ಟು 19 ಸಿಕ್ಸರ್‌ಗಳು ಮತ್ತು 14 ಬೌಂಡರಿಗಳು ದಾಖಲಾಗಿದ್ದು, ಪ್ರೇಕ್ಷಕರಿಗೆ ರಸದೌತಣ ನೀಡಿತು.

ಆರಂಭಿಕ ಹಂತದಲ್ಲಿ ವಿರಾಟ್ ಕೊಹ್ಲಿ (28) ಮತ್ತು ಫಿಲ್ ಸಾಲ್ಟ್ (46) ತಂಡಕ್ಕೆ ಗಟ್ಟಿಯಾದ ನೆಲೆ ಕಲ್ಪಿಸಿದರು. ನಂತರ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್ (50) ಸತತ ಎರಡನೇ ಅರ್ಧಶತಕ ಬಾರಿಸಿ ಇನ್ನಿಂಗ್ಸ್‌ಗೆ ಗತಿ ನೀಡಿದರು. ಅಂತಿಮ ಹಂತದಲ್ಲಿ ನಾಯಕ ರಜತ್ ಪಾಟಿದಾರ್ ಹಾಗೂ ಟಿಮ್ ಡೇವಿಡ್ (25 ಎಸೆತಗಳಲ್ಲಿ 70) ಸ್ಫೋಟಕ ಆಟವಾಡಿ ಕೊನೆಯ ಐದು ಓವರ್‌ಗಳಲ್ಲಿ 97 ರನ್‌ಗಳನ್ನು ಸೇರಿಸಿ ಸ್ಕೋರ್‌ನ್ನು 250ಕ್ಕೆ ಏರಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ಸಿಎಸ್‌ಕೆ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ನಾಯಕ ರುತುರಾಜ್ ಗಾಯಕ್ವಾಡ್ (7) ಮತ್ತು ಸಂಜು ಸ್ಯಾಮ್ಸನ್ (9) ಬೇಗನೇ ವಿಕೆಟ್ ಕಳೆದುಕೊಂಡರು. 30 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ಸರ್ಫರಾಜ್ ಖಾನ್ (50) ಸ್ವಲ್ಪ ಪ್ರತಿರೋಧ ನೀಡಿದರು.

ಆದರೆ ಮಧ್ಯಕ್ರಮದಲ್ಲಿ ಕೃನಾಲ್ ಪಾಂಡ್ಯ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಪಂದ್ಯವನ್ನು ಆರ್‌ಸಿಬಿ ಕಡೆಗೆ ತಳ್ಳಿದರು. ನಂತರ ಭುವನೇಶ್ವರ ಕುಮಾರ್ 3 ಪ್ರಮುಖ ವಿಕೆಟ್ ಪಡೆದು ಸಿಎಸ್‌ಕೆ ಚೇಸ್‌ಗೆ ಬ್ರೇಕ್ ಹಾಕಿದರು. ಕೊನೆ ಹಂತದಲ್ಲಿ ಪ್ರಶಾಂತ್ ವೀರ್ (43) ಮತ್ತು ಜೇಮಿ ಓವರ್ಟನ್ (37) ಹೋರಾಟ ನಡೆಸಿದರೂ, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಸಿಎಸ್‌ಕೆ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಆರ್‌ಸಿಬಿ ಪರ ಭುವನೇಶ್ವರ ಕುಮಾರ್ 3 ವಿಕೆಟ್ ಪಡೆದು ಮಿಂಚಿದರೆ, ಲೂಕಿ ಡಫಿ, ಕೃನಾಲ್ ಪಾಂಡ್ಯ ಮತ್ತು ಅಭಿನಂದನ್ ಸಿಂಗ್ ತಲಾ 2 ವಿಕೆಟ್‌ಗಳನ್ನು ಕಬಳಿಸಿದರು.

ಈ ಗೆಲುವಿನೊಂದಿಗೆ ಆರ್‌ಸಿಬಿ ತನ್ನ ತವರು ಮೈದಾನದಲ್ಲಿ ಸತತ ಎರಡನೇ ಜಯ ಸಾಧಿಸಿದ್ದು, ಈ ಬಾರಿ ಅಭಿಮಾನಿಗಳಿಗೆ ನಿರಾಶೆ ನೀಡದೇ ಬಲಿಷ್ಠ ಆರಂಭವನ್ನು ದಾಖಲಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande