
ಗದಗ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಎರಡು ಗ್ರಾಮ ಪಂಚಾಯತಿಗಳ ಕಾರ್ಯಭಾರ ಹಾಗೂ ಲೋಕಾಯುಕ್ತ ತನಿಖೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪಿಡಿಒ ಮಕ್ತುಂ ಹುಸೇನ್ ಕರಡಿಗುಡ್ಡ (46) ಅವರು ಪಟ್ಟಣದ ಶ್ರೀನಗರದಲ್ಲಿನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಮೂಲತಃ ಧಾರವಾಡದವರಾದ ಮಕ್ತುಂ ಹುಸೇನ್ ಅವರು ಎರಡು ತಿಂಗಳ ಹಿಂದೆ ರೋಣ ತಾಲೂಕಿನಲ್ಲಿ ಪಿಡಿಒ ಆಗಿ ಸೇವೆ ಆರಂಭಿಸಿದ್ದರು. ತಾಲೂಕಿನ ಅಸೂಟಿ ಮತ್ತು ಕೊತಬಾಳ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಅವರನ್ನು ನಿಯೋಜಿಸಲಾಗಿತ್ತು. ಪಿಡಿಒಗಳ ಕೊರತೆಯಿಂದಾಗಿ ಎರಡು ಗ್ರಾಪಂಗಳ ಹೊಣೆಗಾರಿಕೆ ವಹಿಸಿಕೊಂಡಿದ್ದ ಅವರು ಕೆಲಸದ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಇದಲ್ಲದೆ, 2021ರಿಂದ 2023ರ ಅವಧಿಗೆ ಸಂಬಂಧಿಸಿದಂತೆ ಅವರ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಾಗಿದ್ದ ಮಾಹಿತಿ ಹೊರಬಂದಿದೆ. ಕೊತಬಾಳ ಗ್ರಾಮ ಪಂಚಾಯತಿಯಲ್ಲಿ ನರೇಗಾ ಸಂಬಂಧಿತ ಪ್ರಕರಣವೂ ಇದ್ದು, “ಯಾರೋ ಮಾಡಿದ ತಪ್ಪಿಗೆ ನಾವು ಬೆಂಗಳೂರಿಗೆ ಅಲೆದಾಡಬೇಕಾಗಿದೆ” ಎಂದು ಅವರು ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ಆಸ್ಮಾಬಾನು ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿಯಂತೆ, “ಎರಡು ಗ್ರಾಪಂಗಳ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಒಂದೇ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗಬಹುದು ಎಂದು ತಾಪಂ ಇಒ ತಿಳಿಸಿದ್ದಾರೆ ಎಂದು ನನಗೆ ಹೇಳಿದ್ದರು. ಬೆಂಗಳೂರಿಗೆ ಹೋಗುವ ವಿಚಾರವನ್ನೂ ಚರ್ಚಿಸಿದ್ದರು. ಮಂಗಳವಾರ ರಾತ್ರಿ ಮಾತನಾಡಿ ‘ಸುಸ್ತಾಗಿದ್ದೇನೆ, ಮತ್ತೆ ಕರೆ ಮಾಡಬೇಡಿ’ ಎಂದಿದ್ದರು. ನಂತರ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮನೆಯ ಮಾಲೀಕರಿಗೆ ತಿಳಿಸಿದಾಗ ಘಟನೆ ಗೊತ್ತಾಯಿತು” ಎಂದು ತಿಳಿಸಿದ್ದಾರೆ.
ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ನನ್ನ ಗಂಡ ತುಂಬಾ ಒಳ್ಳೆಯ ಮನುಷ್ಯ. ನನಗೆ ಮೂವರು ಗಂಡು ಮಕ್ಕಳು ಇದ್ದಾರೆ. ನನ್ನ ಸ್ಥಿತಿ ಹೀಗಾಗಬಾರದಿತ್ತು. ಇಷ್ಟು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಜೀವನವನ್ನು ಹೇಗೆ ನಡೆಸಲಿ, ಎಂದು ಪತ್ನಿ ಆಸ್ಮಾಬಾನು ಹೇಳುತ್ತಿದ್ದಾರೆ.
“ಅಸೂಟಿ ಗ್ರಾಮ ಪಂಚಾಯತ್ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ನಾನು ಸಹ ಅವರಿಗೆ ಧೈರ್ಯ ನೀಡಿ, ಸ್ವತಃ ಅಲ್ಲಿಗೆ ತೆರಳಿ ಸಮಸ್ಯೆ ಬಗೆಹರಿಸಿದ್ದೆ. ಅಲ್ಲದೆ ಗ್ರಾಪಂ ಬದಲಾಯಿಸುವ ಬಗ್ಗೆಗೂ ತಿಳಿಸಿದ್ದೆ. ‘ಚಿಕ್ಕ ಮಕ್ಕಳು ಇದ್ದಾರೆ ಸರ್, ಶಾಲೆ ಆರಂಭವಾದ ತಕ್ಷಣ ಇಲ್ಲಿಯೇ ಶಾಲೆಗೆ ಸೇರಿಸುತ್ತೇನೆ’ ಎಂದು ಹೇಳಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಹೇಳಿ ಕಳಿಸಿದ್ದೆ. ಆದರೆ ಅವರು ಹೀಗೆ ಮಾಡಿಕೊಂಡಿರುವುದು ನನಗೆ ಅರ್ಥವಾಗುತ್ತಿಲ್ಲ, ಎಂದು ತಾಲೂಕು ಪಂಚಾಯತ ಇಒ ಚಂದ್ರಶೇಖರ್ ಕಂದಕೂರ ಹೇಳಿದ್ದಾರೆ.
“ಸಿಪಿಐ ಸಾಹೇಬರು ಹಾಗೂ ನಾನು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ನಮ್ಮ ವಿಶೇಷ ತನಿಖಾ ತಂಡವೂ ಆಗಮಿಸಿದೆ. ಮುಂದಿನ ಕ್ರಮಗಳ ಕುರಿತು ನಂತರ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಪಿಎಸ್ ಐ ಪ್ರಕಾಶ ಬಣಕಾರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP