
ವಿಜಯಪುರ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ನಗರಸಭೆ ಎದುರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು ತಮ್ಮ ಸೇವೆಯನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದರೂ ಉದ್ಯೋಗದಲ್ಲಿ ಭದ್ರತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ಕಾರ್ಮಿಕರು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಮಿಕರು, ನಗರಸಭೆಯಲ್ಲಿ ಸ್ವಚ್ಛತೆ, ನೀರು ಸರಬರಾಜು, ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ಪ್ರಮುಖ ಸೇವೆಗಳನ್ನು ನಿಭಾಯಿಸುತ್ತಿದ್ದರೂ, ನಮಗೆ ಶಾಶ್ವತ ನೇಮಕಾತಿ ಸಿಗದಿರುವುದು ಅನ್ಯಾಯಕರ ಎಂದು ಆರೋಪಿಸಿದರು. ವೇತನದಲ್ಲಿ ಅನಿಶ್ಚಿತತೆ, ಸಾಮಾಜಿಕ ಭದ್ರತಾ ಸೌಲಭ್ಯಗಳ ಕೊರತೆ ಹಾಗೂ ಕೆಲಸದ ಪರಿಸ್ಥಿತಿಗಳ ಸಮಸ್ಯೆಗಳ ಬಗ್ಗೆ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕರ ಬೇಡಿಕೆಗಳಿಗೆ ಬೆಂಬಲವಾಗಿ ಹಲವು ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾರ್ಮಿಕರಿಗೆ ನ್ಯಾಯಯುತವಾದ ಹಕ್ಕುಗಳನ್ನು ಒದಗಿಸಬೇಕು, ಅವರ ಸೇವೆಯನ್ನು ಮಾನ್ಯಗೊಳಿಸಿ ಶಾಶ್ವತಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ವೇಳೆ ಕೆಲಕಾಲ ನಗರಸಭೆ ಎದುರು ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಕಾರ್ಮಿಕರ ಮನವಿ ಸ್ವೀಕರಿಸಿ ಸರ್ಕಾರ ಗಮನಕ್ಕೆ ತರಲಾಗುವುದು ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande