
ವಿಜಯಪುರ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಕಾಲುಬಾಯಿ (Foot and Mouth Disease - FMD) ಲಸಿಕಾ ಅಭಿಯಾನವು ಏಪ್ರಿಲ್ 23ರಿಂದ ಮೇ 22ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಮಹತ್ವದ ಅಭಿಯಾನದ ಅಂಗವಾಗಿ ಗುರುವಾರ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ರೈತರ ಮನೆಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಿದರು.
ಕಾಲುಬಾಯಿ ರೋಗವು ಜಾನುವಾರುಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಹಲವು ಪಶುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೋಗದಿಂದ ಪಶುಗಳ ಉತ್ಪಾದಕತೆ ಕುಗ್ಗುವುದರೊಂದಿಗೆ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ತಿಳಿಸಿದೆ.
ಅಭಿಯಾನವನ್ನು ಯಶಸ್ವಿಗೊಳಿಸಲು ಪಶುವೈದ್ಯರು, ಸಹಾಯಕ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಸಹಕಾರದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ. ಪ್ರತಿ ಜಾನುವಾರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು, ಯಾವುದೇ ರೈತರು ಈ ಅವಕಾಶವನ್ನು ಕೈಚೆಲ್ಲಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ಒಳಗೊಂಡಂತೆ ಹಂತ ಹಂತವಾಗಿ ಲಸಿಕಾ ಕಾರ್ಯ ನಡೆಯಲಿದೆ. ರೈತರು ತಮ್ಮ ಜಾನುವಾರುಗಳನ್ನು ಲಸಿಕೆಗಾಗಿ ಸಿದ್ಧವಾಗಿರಿಸಿ, ಇಲಾಖೆಯ ಸಿಬ್ಬಂದಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಈ ಅಭಿಯಾನದಿಂದ ಕಾಲುಬಾಯಿ ರೋಗದ ನಿಯಂತ್ರಣ ಸಾಧ್ಯವಾಗಲಿದ್ದು, ಪಶು ಸಂಪತ್ತಿನ ರಕ್ಷಣೆಗೂ ಹಾಗೂ ರೈತರ ಆದಾಯ ವೃದ್ಧಿಗೂ ಇದು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande