
ಚಂಡೀಗಡ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಂಜಾಬ್–ಹರಿಯಾಣ ಗಡಿಯಲ್ಲಿರುವ ಶಂಭು ಗಡಿ ಸಮೀಪ ದೆಹಲಿ–ಪಟಿಯಾಲಾ ರೈಲ್ವೆ ಮಾರ್ಗದಲ್ಲಿ ಮಂಗಳವಾರ ಮುಂಜಾನೆ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟಕವನ್ನು ಇರಿಸಿದ ಶಂಕಿತ ವ್ಯಕ್ತಿ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ.
ಪೊಲೀಸರ ಪ್ರಕಾರ, ಪಟಿಯಾಲ ಜಿಲ್ಲೆಯ ಬಾಥೋನಿಯಾ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ರೈಲ್ವೆ ಹಳಿಯಲ್ಲಿ ಆಳವಾದ ಕುಳಿ ಉಂಟಾಗಿದ್ದು, ಕೆಲ ಗಂಟೆಗಳ ಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಿ ಸಂಚಾರವನ್ನು ಪುನರಾರಂಭಿಸಲಾಗಿದೆ.
ಪಟಿಯಾಲಾ ಎಸ್ಎಸ್ಪಿ ವರುಣ್ ಶರ್ಮಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಐಜಿ ಪಟಿಯಾಲಾ ಶ್ರೇಣಿ, ಜಿಆರ್ಪಿ ಹಾಗೂ ಆರ್ಪಿಎಫ್ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ದು, ತನಿಖೆಯನ್ನು ವೇಗಗೊಳಿಸಿದ್ದಾರೆ.
ಸ್ಫೋಟದ ಸ್ಥಳದಲ್ಲಿ ಶಂಕಿತ ವ್ಯಕ್ತಿಯ ದೇಹದ ಅವಶೇಷಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳದಿಂದ ಮೊಬೈಲ್ ಫೋನ್ ಸಿಮ್ ಕಾರ್ಡ್ ಸೇರಿದಂತೆ ಕೆಲವು ಪ್ರಮುಖ ಸುಳಿವುಗಳು ದೊರೆತಿದ್ದು, ಅವುಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಇದೇ ನಡುವೆ, ಸುಮಾರು ಒಂದು ವಾರದ ಹಿಂದೆ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಅಂಬಾಲಾದಿಂದ ದೆಹಲಿಗೆ ಹೋಗುವ ಮಾರ್ಗವನ್ನು ಗುರಿಯಾಗಿಸಿಕೊಂಡು ಬೆಳಿಗ್ಗೆ 8.11ಕ್ಕೆ ಸ್ಫೋಟಿಸುವುದಾಗಿ ಬೆದರಿಕೆ ನೀಡಲಾಗಿತ್ತು ಎಂಬುದು ಗಮನಾರ್ಹ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa