ಸಿಕ್ಕಿಂ ಪ್ರವಾಸ ಮುಕ್ತಾಯ ; ಇಂದು ವಾರಾಣಸಿಗೆ ಪ್ರಧಾನಿ ಮೋದಿ
ವಾರಾಣಸಿ
Pm


ನವದೆಹಲಿ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಈಶಾನ್ಯ ರಾಜ್ಯ ಸಿಕ್ಕಿಂನ ಎರಡು ದಿನಗಳ ಭೇಟಿ ಇಂದು ಮುಕ್ತಾಯಗೊಂಡಿದ್ದು, ಅವರು ಇಂದು ಸಂಜೆ ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಗೆ ಆಗಮಿಸಲಿದ್ದಾರೆ.

ಸಿಕ್ಕಿಂನಲ್ಲಿ ನಡೆದ ಕಾರ್ಯಕ್ರಮಗಳ ಬಳಿಕ ಅವರು ಉತ್ತರ ಪ್ರದೇಶಕ್ಕೆ ತೆರಳಲಿದ್ದು, ವಾರಾಣಸಿಯಲ್ಲಿ ಸುಮಾರು ₹6,350 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಜೊತೆಗೆ ನಾಳೆ ಹರ್ದೋಯಿ ಜಿಲ್ಲೆಯಲ್ಲಿ ಗಂಗಾ ಎಕ್ಸ್ಪ್ರೆಸ್ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಸರ್ಕಾರದ ಪ್ರಕಟಣೆಯ ಪ್ರಕಾರ, ಸಿಕ್ಕಿಂನಲ್ಲಿ ಸುಮಾರು ₹4,000 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಗ್ಯಾಂಗ್ಟಾಕ್ನಲ್ಲಿ ಆರ್ಕಿಡ್ ಉದ್ಯಾನವನಕ್ಕೆ ಭೇಟಿ ನೀಡಿದ ಅವರು, ಸಿಕ್ಕಿಂ ರಾಜ್ಯ ರಚನೆಯ 50ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಹಲವು ಯೋಜನೆಗಳನ್ನು ಉದ್ಘಾಟಿಸಿದರು.

ವಾರಾಣಸಿಯಲ್ಲಿ ಇಂದು ಸಂಜೆ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರಧಾನಿ, ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ ಅವರು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಹರ್ದೋಯಿಗೆ ತೆರಳಲಿದ್ದಾರೆ.

ವಾರಾಣಸಿಯಲ್ಲಿ ₹1,050 ಕೋಟಿ ಮೌಲ್ಯದ 48 ಪೂರ್ಣಗೊಂಡ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ, ರಸ್ತೆ, ರೈಲು ಮೇಲ್ಸೇತುವೆ, ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಜಲ ಜೀವನ ಮಿಷನ್ ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಘಾಟ್ಗಳ ಪುನರ್ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ಉದ್ಘಾಟಿಸಲಿದ್ದಾರೆ.

ಇದಲ್ಲದೆ ₹5,300 ಕೋಟಿ ಮೌಲ್ಯದ 112ಕ್ಕೂ ಹೆಚ್ಚು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಆಸ್ಪತ್ರೆಗಳು, ಮಾರುಕಟ್ಟೆ ಸಂಕೀರ್ಣಗಳು, ನೀರು ಸರಬರಾಜು ಯೋಜನೆಗಳು ಹಾಗೂ ಆಡಳಿತ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.

ಈ ವೇಳೆ ರೈಲು ಮತ್ತು ರಸ್ತೆ ಸಂಪರ್ಕ ಸುಧಾರಣೆಗೆ ಸಂಬಂಧಿಸಿದ ಯೋಜನೆಗಳಿಗೂ ಚಾಲನೆ ನೀಡಲಾಗುತ್ತಿದ್ದು, ವಾರಣಾಸಿ-ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ನಡುವಿನ ಹೊಸ ರೈಲು ಮಾರ್ಗ ಯೋಜನೆಯೂ ಸೇರಿದೆ.

ಪ್ರಧಾನ ಮಂತ್ರಿ ಎರಡು ಹೊಸ ಅಮೃತ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದು, ಇದು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ.

ಹರ್ದೋಯಿಯಲ್ಲಿ ಉದ್ಘಾಟನೆಗೊಳ್ಳಲಿರುವ ಗಂಗಾ ಎಕ್ಸ್ಪ್ರೆಸ್ವೇ ಸುಮಾರು 594 ಕಿಲೋಮೀಟರ್ ಉದ್ದದ, ಆರು ಲೇನ್ಗಳ ವೇಗದ ಮಾರ್ಗವಾಗಿದ್ದು, ಇದು ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ಪೂರ್ವ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಆರ್ಥಿಕ ಕಾರಿಡಾರ್ ಆಗಿದೆ. ಈ ಮಾರ್ಗದಿಂದ ಪ್ರಯಾಣದ ಸಮಯವು ಗಣನೀಯವಾಗಿ ಕಡಿಮೆಯಾಗಲಿದ್ದು, ವ್ಯಾಪಾರ, ಕೈಗಾರಿಕೆ ಮತ್ತು ಕೃಷಿಗೆ ಉತ್ತೇಜನ ಸಿಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande