
ಭೋಪಾಲ್, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಒಂದು ಶತಮಾನಕ್ಕೂ ಹೆಚ್ಚು ಕಾಲ ಅಳಿವಿನಂಚಿನಲ್ಲಿದ್ದ ಕಾಡೆಮ್ಮೆ ಪ್ರಭೇದವನ್ನು ಮಧ್ಯ ಪ್ರದೇಶದಲ್ಲಿ ಮರುಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಚಾಲನೆ ದೊರೆಯಲಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ನಾಲ್ಕು ಕಾಡೆಮ್ಮೆಗಳನ್ನು ತರಲಾಗುತ್ತಿದ್ದು, ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಬಾಲಾಘಾಟ್ ಜಿಲ್ಲೆಯ ಸುಪ್ಖರ್ ಪ್ರದೇಶದಲ್ಲಿ ಅವುಗಳನ್ನು ಬಿಡುಗಡೆ ಮಾಡಲಿದ್ದಾರೆ.
ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಕೆ. ಜೋಶಿ ಅವರ ಮಾಹಿತಿ ಪ್ರಕಾರ, ಈ ತಂಡದಲ್ಲಿ ಮೂರು ಹೆಣ್ಣು ಮತ್ತು ಒಂದು ಗಂಡು ಕಾಡೆಮ್ಮೆ ಸೇರಿವೆ. ಜಿಲ್ಲಾ ಉಸ್ತುವಾರಿ ಸಚಿವ ಉದಯ್ ಪ್ರತಾಪ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಯೋಜನೆಯಡಿ, ಕಾಡೆಮ್ಮೆಗಳನ್ನು ಕನ್ಹಾ ಹುಲಿ ಸಂರಕ್ಷಿತ ಅರಣ್ಯಕ್ಕೆ ಪರಿಚಯಿಸಲಾಗುತ್ತಿದೆ. ಮೊದಲ ಹಂತದಲ್ಲಿ ನಾಲ್ಕು ಕಾಡೆಮ್ಮೆಗಳನ್ನು ತರಲಾಗಿದ್ದು, ಒಟ್ಟು 50 ಕಾಡೆಮ್ಮೆಗಳನ್ನು ‘ಸಂಸ್ಥಾಪಕ ಜನಸಂಖ್ಯೆ’ಯಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈ ಋತುವಿನಲ್ಲಿ ಇನ್ನೂ 8 ಕಾಡೆಮ್ಮೆಗಳನ್ನು ಸ್ಥಳಾಂತರಿಸುವ ಯೋಜನೆಯೂ ಇದೆ.
ಇದೊಂದೇ ಅಲ್ಲದೆ, ಮಧ್ಯಪ್ರದೇಶ ಮತ್ತು ಅಸ್ಸಾಂ ನಡುವಿನ ವನ್ಯಜೀವಿ ವಿನಿಮಯಕ್ಕೂ ಹೊಸ ಆಯಾಮ ಸಿಗುತ್ತಿದೆ. ಅಸ್ಸಾಂನಿಂದ ಎರಡು ಜೋಡಿ ಖಡ್ಗಮೃಗಗಳನ್ನು ಭೋಪಾಲ್ನ ವಾನ್ ವಿಹಾರ್ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗುತ್ತದೆ. ಪ್ರತಿಯಾಗಿ ಮಧ್ಯಪ್ರದೇಶವು ಅಸ್ಸಾಂಗೆ 3 ಹುಲಿಗಳು ಮತ್ತು 6 ಮೊಸಳೆಗಳನ್ನು ನೀಡಲಿದೆ.
ಚಿರತೆಗಳ ಯಶಸ್ವಿ ಮರುಸ್ಥಾಪನೆಯ ನಂತರ, ಕಾಡೆಮ್ಮೆ ಮರಳುವಿಕೆ ರಾಜ್ಯದ ಜೀವವೈವಿಧ್ಯತೆಗೆ ಹೊಸ ಶಕ್ತಿ ನೀಡಲಿದೆ. ಅತಿಯಾದ ಬೇಟೆ, ಮಾನವ ಹಸ್ತಕ್ಷೇಪ ಹಾಗೂ ಆವಾಸಸ್ಥಾನದ ಹಾನಿಯಿಂದ ಸುಮಾರು 100 ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ಈ ಪ್ರಭೇದ ನಾಶವಾಗಿತ್ತು. 1979ರ ಸುಮಾರಿಗೆ ಕೊನೆಯದಾಗಿ ಕನ್ಹಾ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.
ಭಾರತೀಯ ವನ್ಯಜೀವಿ ಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ, ಕನ್ಹಾ ಪ್ರದೇಶವು ಕಾಡೆಮ್ಮೆ ಮರು ಪರಿಚಯಕ್ಕೆ ಅತ್ಯಂತ ಸೂಕ್ತವಾಗಿದೆ. ವಿಶಾಲ ಹುಲ್ಲುಗಾವಲು, ಸಾಕಷ್ಟು ನೀರು ಮತ್ತು ಕಡಿಮೆ ಮಾನವ ಹಸ್ತಕ್ಷೇಪವು ಈ ಪ್ರಭೇದಕ್ಕೆ ಅನುಕೂಲಕರ ಪರಿಸರ ಒದಗಿಸುತ್ತದೆ.
ಸುಪ್ಖರ್ನಲ್ಲಿ ಕಾಡೆಮ್ಮೆಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಮಧ್ಯಪ್ರದೇಶದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಹೊಸ ಅಧ್ಯಾಯ ಆರಂಭವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa