
ವಿಜಯಪುರ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿನಿಯರು ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಲಭ್ಯವಿರುವ ಉದ್ಯೋಗಾವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣನವರ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗ ಮತ್ತು ವೃತ್ತಿ ಸಮಾಲೋಚನ ಕೋಶ, ದೈಹಿಕ ಶಿಕ್ಷಣ ಅಧ್ಯಯನ ಹಾಗೂ ಕ್ರೀಡಾ ವಿಜ್ಞಾನ ವಿಭಾಗ ಮತ್ತು ಟನ್ವಿಕ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಂದು ದಿನದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಮೇಳಗಳು ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಸ್ಪಷ್ಟ ಅರಿವು ಮೂಡಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳ ಅವಕಾಶಗಳನ್ನು ಪರಿಚಯಿಸುತ್ತವೆ. ವಿದ್ಯಾರ್ಥಿನಿಯರು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಟನ್ವಿಕ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ರವಿ ಪಿಳ್ಳೆ ಮತ್ತು ಸಂತೋಷ್ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಹನುಮಂತಯ್ಯ ಪೂಜಾರಿ, ಉದ್ಯೋಗ ಮತ್ತು ವೃತ್ತಿ ಸಮಾಲೋಚನ ಕೋಶದ ಸಂಯೋಜಕ ಡಾ. ಚಂದ್ರಶೇಖರ್ ಮಠಪತಿ, ಪ್ರಾಧ್ಯಾಪಕರಾದ ಡಾ. ರಾಜಕುಮಾರ್ ಮಾಲಿಪಾಟೀಲ್, ಡಾ. ಜ್ಯೋತಿ ಉಪಾಧ್ಯಾಯ ಹಾಗೂ ಡಾ. ಕಿರಣ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande