
ಹುಬ್ಬಳ್ಳಿ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿರುವ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಹಾಗೂ ರೋಟೇರಿಯನ್ ಡಾ. ವಿ.ಎಸ್.ವಿ. ಪ್ರಸಾದ ತಿಳಿಸಿದ್ದಾರೆ.
ವಿದ್ಯಾನಗರದ ನೆಕಾರ್ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಮತ್ತು ಸ್ವರ್ಣ ಸಮೂಹ ಸಂಸ್ಥೆ ಸಂಯುಕ್ತವಾಗಿ ಕೈಗೊಂಡ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಯ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಸ್ವರ್ಣ ಸಮೂಹ ಸಂಸ್ಥೆಯಿಂದ ಸುಮಾರು 2,000 ಚದರ ಅಡಿ ಪ್ರದೇಶದಲ್ಲಿ ಪೇವರ್ಸ್ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸುರಕ್ಷಿತ ಹಾಗೂ ಸ್ವಚ್ಛ ನಡೆ ದಾರಿ ಕಲ್ಪಿಸಲಾಗಿದೆ. ಜೊತೆಗೆ ಎರಡು ತರಗತಿ ಕೊಠಡಿಗಳಿಗೆ ಸಂಪೂರ್ಣ ಬಣ್ಣ ಹಚ್ಚಲಾಗಿದ್ದು, ಮಕ್ಕಳ ಸಾಂಸ್ಕೃತಿಕ ಹಾಗೂ ಶಾಲಾ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ವೇದಿಕೆಯ ಮೇಲೆ ಹೊಸ ಶೆಡ್ ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು.
ಸರ್ಕಾರಿ ಶಾಲೆಗಳಿಗೆ ಅನುದಾನ ಸೀಮಿತವಾಗಿರುವ ಸಂದರ್ಭದಲ್ಲಿ ರೋಟರಿ ಸಂಸ್ಥೆಗಳು ಮುಂದೆ ಬಂದು ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿರುವುದು ಸಾರ್ಥಕ ಸೇವೆಯಾಗಿದೆ ಎಂದು ಡಾ. ಪ್ರಸಾದ ಅಭಿಪ್ರಾಯಪಟ್ಟರು. ಇಂತಹ ಸಮಾಜಮುಖಿ ಕಾರ್ಯಗಳಿಗೆ ಮುಂದೆಯೂ ತಮ್ಮ ಸಂಸ್ಥೆಯಿಂದ ಸಹಕಾರ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ರೋಟರಿ 3170 ಡಿಸ್ಟ್ರಿಕ್ಟ್ನ ಜಿಲ್ಲಾ ಗವರ್ನರ್ ಅರುಣ ಭಂಡಾರೆ ಮಾತನಾಡಿ, ನಗರದಲ್ಲಿ ಹಲವು ಹಿರಿಯ ಕ್ಲಬ್ಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ರೋಟರಿ ಕ್ಲಬ್ ಹುಬ್ಬಳ್ಳಿ ಎಲೈಟ್ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು. ಮುಂದಿನ ದಿನಗಳಲ್ಲೂ ಈ ಸೇವಾ ಚಟುವಟಿಕೆಗಳು ನಿರಂತರವಾಗಿರಲಿ ಎಂದು ಅವರು ಆಶಿಸಿದರು. ಸಮಾಜಮುಖಿ ಯೋಜನೆಗಳಿಗೆ ಡಿಸ್ಟ್ರಿಕ್ಟ್ ವತಿಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಜಿ ರೋಟೇರಿಯನ್ ರಾಧಿಕಾ ಗೋಖಲೆ, ಕ್ಲಬ್ ಅಧ್ಯಕ್ಷ ಅವಿನಾಶ ಕುರ್ತಕೋಟಿ, ಕಾರ್ಯದರ್ಶಿ ಅಂಬಾಪ್ರಸಾದ ಮಲ್ಯ, ಶಾಲಾ ಚೇರ್ಮನ್ ಶರದ್ ಜಾಧವ ಹಾಗೂ ಪ್ರಾಜೆಕ್ಟ್ ಸಂಯೋಜಕ ಗೌತಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa