ಬಾವಿಗೆ ಬಿದ್ದು ವ್ಯಕ್ತಿ ದುರ್ಮರಣ ; ಮುಷ್ಟಿಗೇರಿಯಲ್ಲಿ ದುರ್ಘಟನೆ
ಉಂಟಾಗಿದೆ
ಬಾವಿಗೆ ಬಿದ್ದು ವ್ಯಕ್ತಿ ದುರ್ಮರಣ ; ಮುಷ್ಟಿಗೇರಿಯಲ್ಲಿ ದುರ್ಘಟನೆ


ಬಾಗಲಕೋಟೆ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಗಿಡ ಕಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ಆಯಾ ತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಗ್ರಾಮದ ನಿವಾಸಿ ಸೋಮಲಿಂಗ ದ್ಯಾಮಣ್ಣ ಇದ್ದಲಿ (50) ಎಂದು ಗುರುತಿಸಲಾಗಿದ್ದು, ಇವರು ಬೆಳಗಿನ ವೇಳೆಯಲ್ಲಿ ತಮ್ಮ ಜಮೀನಿನ ಸಮೀಪದಲ್ಲಿರುವ ಬಾವಿ ಹತ್ತಿರ ಗಿಡವನ್ನು ಕಡಿಯಲು ತೆರಳಿದ್ದರೆಂದು ತಿಳಿದು ಬಂದಿದೆ. ಗಿಡ ಕಡಿಯುವ ವೇಳೆ ಕಾಲು ಜಾರಿ ಸಮತೋಲನ ಕಳೆದುಕೊಂಡ ಅವರು ಹತ್ತಿರದಲ್ಲಿದ್ದ ಹಾಳು ಬಾವಿಗೆ ಬಿದ್ದಿದ್ದಾರೆ.

ಘಟನೆಯ ವೇಳೆ ಸಮೀಪದಲ್ಲಿ ಯಾರೂ ಇಲ್ಲದ ಕಾರಣ ತಕ್ಷಣ ಸಹಾಯ ದೊರೆಯದೆ, ಬಾವಿಯೊಳಗೆ ಬಿದ್ದಿದ್ದ ಅವರು ದುರ್ಮರಣಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಬಹುಕಾಲ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಬಾವಿಯೊಳಗೆ ಮೃತದೇಹ ಪತ್ತೆಯಾಗಿದೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿ, ನಂತರ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರ ಸಹಾಯದಿಂದ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮೃತರು ಕುಟುಂಬದ ಪ್ರಮುಖ ಆಧಾರವಾಗಿದ್ದು, ಅವರ ನಿಧನದಿಂದ ಕುಟುಂಬಸ್ಥರಲ್ಲೂ ಹಾಗೂ ಗ್ರಾಮದಲ್ಲಿ ಶೋಕದ ವಾತಾವರಣ ಉಂಟಾಗಿದೆ.

ಗ್ರಾಮಸ್ಥರು ಈ ಘಟನೆಗೆ ಸಂಬಂಧಿಸಿ, ಹಾಳಾದ ಬಾವಿಗಳಿಗೆ ಸೂಕ್ತ ಮುಚ್ಚಳ ಹಾಕುವುದು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಾವಶ್ಯಕ ಎಂದು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande