
ಬರಾಕ್ಪುರ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದ ಬರಾಕ್ಪುರದ ಐತಿಹಾಸಿಕ ನೆಲೆಯಿಂದ ರಾಜ್ಯದಲ್ಲಿ ಬದಲಾವಣೆಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ಇಲ್ಲಿ ನಡೆದ ವಿಜಯ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಗಾಳದಲ್ಲಿ ರಾಜಕೀಯ ಪರಿವರ್ತನೆ ಅನಿವಾರ್ಯವಾಗಿದ್ದು, ಬಿಜೆಪಿ ಸರ್ಕಾರ ರಚನೆಯ ಬಗ್ಗೆ ತಾವು ಸಂಪೂರ್ಣ ವಿಶ್ವಾಸ ಹೊಂದಿರುವುದಾಗಿ ಹೇಳಿದರು.
1857ರ ಮೊದಲ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಬರಾಕ್ಪುರದ ನೆಲ ಇತಿಹಾಸ ಪ್ರಸಿದ್ಧವಾಗಿದ್ದು, ಈಗ ಅದೇ ನೆಲ ಬದಲಾವಣೆಯ ಸಂಕೇತವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು. “ಬಂಗಾಳಕ್ಕೆ ಸೇವೆ ಸಲ್ಲಿಸುವುದು ಮತ್ತು ಅದನ್ನು ಭದ್ರಗೊಳಿಸುವುದು ನನ್ನ ಹೊಣೆಗಾರಿಕೆ. ನಾನು ಇದರಿಂದ ಹಿಂದೆ ಸರಿಯುವುದಿಲ್ಲ,” ಎಂದು ಅವರು ಹೇಳಿದರು.
ಈ ರ‍್ಯಾಲಿಯನ್ನು ಪ್ರಸ್ತುತ ಚುನಾವಣೆಯ ಕೊನೆಯ ಸಾರ್ವಜನಿಕ ಸಭೆಯೆಂದು ಬಣ್ಣಿಸಿದ ಪ್ರಧಾನಿ, ಮೇ 1 ನಂತರ ಮತ್ತೆ ಬಂದು ಬಿಜೆಪಿಯ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದರು. ಹೆಲಿಪ್ಯಾಡ್ನಿಂದಲೇ ಸಾವಿರಾರು ಜನರು ಸೇರಿದ್ದನ್ನು ಉಲ್ಲೇಖಿಸಿದ ಅವರು, ಜನರ ಅಪಾರ ಬೆಂಬಲದಿಂದ ತಾವು ಉತ್ಸಾಹಗೊಂಡಿರುವುದಾಗಿ ತಿಳಿಸಿದರು.
ತಮ್ಮ ರೋಡ್ ಶೋಗಳನ್ನು ತೀರ್ಥಯಾತ್ರೆಯ ಅನುಭವಕ್ಕೆ ಹೋಲಿಸಿದ ಮೋದಿ, ಜನರ ಪ್ರೀತಿ ಮತ್ತು ವಿಶ್ವಾಸವೇ ತಮ್ಮ ಶಕ್ತಿ ಎಂದು ಹೇಳಿದರು. “ದೇಶದಾದ್ಯಂತ ಹಲವು ದಶಕಗಳಿಂದ ಸಂಚರಿಸುತ್ತಿದ್ದೇನೆ, ಜನರೇ ನನ್ನ ಕುಟುಂಬ,” ಎಂದರು.
ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಖಾನೆಗಳು ಮುಚ್ಚುತ್ತಿವೆ, ಆದರೆ ಬಾಂಬ್ ಕಾರ್ಖಾನೆಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು. ಬರಾಕ್ಪುರ ಕೈಗಾರಿಕಾ ಪ್ರದೇಶದಲ್ಲಿ ಕಳೆದ ಕೆಲ ತಿಂಗಳಲ್ಲಿ ಹಲವಾರು ಜ್ಯೂಟ್ ಮಿಲ್ಗಳು ಮುಚ್ಚಿರುವುದನ್ನು ಉಲ್ಲೇಖಿಸಿ, ಇದರಿಂದ ಯುವಕರಿಗೆ ಉದ್ಯೋಗದ ಸಂಕಷ್ಟ ಎದುರಾಗಿದೆ ಎಂದು ಹೇಳಿದರು.
“ತೃಣಮೂಲದ ರಾಜಕೀಯವು ನಿಂದನೆ, ಬೆದರಿಕೆ ಮತ್ತು ಸುಳ್ಳುಗಳ ಮೇಲೆ ನಿಂತಿದೆ. 15 ವರ್ಷಗಳ ಆಡಳಿತದ ಸಾಧನೆಗಳನ್ನು ವಿವರಿಸಲು ಅವರಿಗೆ ಏನೂ ಇಲ್ಲ,” ಎಂದು ಅವರು ಟೀಕಿಸಿದರು. “ಮಾ, ಮಾಟಿ, ಮನುಷ್” ಘೋಷಣೆಯನ್ನು ಮರೆತಿರುವ ಟಿಎಂಸಿ ಮಹಿಳೆಯರು, ರೈತರು ಹಾಗೂ ಯುವಕರಿಗೆ ನ್ಯಾಯ ಒದಗಿಸಿಲ್ಲ ಎಂದು ಹೇಳಿದರು.
ಮಹಿಳೆಯರ ಸುರಕ್ಷತೆ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಕಾನೂನು-ಸುವ್ಯವಸ್ಥೆ ಬಲಪಡಿಸಲು ಕಮಲ ಚಿಹ್ನೆಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಬಂಗಾಳದಲ್ಲಿ ವಲಸೆ ಸಮಸ್ಯೆ ಮತ್ತು ಉದ್ಯೋಗ ಕೊರತೆಯಿಂದ ಯುವಕರು ರಾಜ್ಯ ಬಿಟ್ಟು ಹೋಗುತ್ತಿರುವುದನ್ನೂ ಅವರು ಉಲ್ಲೇಖಿಸಿದರು.
ಬಿಜೆಪಿ ಸರ್ಕಾರ ರಚನೆಯಾದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿ ಪ್ರಮುಖ ಆದ್ಯತೆಯಾಗಲಿದೆ ಎಂದು ತಿಳಿಸಿದ ಪ್ರಧಾನಿ, ಐದು ಪ್ರಮುಖ ಉದ್ಯೋಗ ಕ್ರಮಗಳನ್ನು ಘೋಷಿಸಿದರು.
ಪಾರದರ್ಶಕ ನೇಮಕಾತಿ, ಖಾಲಿ ಹುದ್ದೆಗಳ ಭರ್ತಿ, ಏಳನೇ ವೇತನ ಆಯೋಗದ ಪ್ರಯೋಜನ, ಗ್ರಾಮೀಣ ಉದ್ಯೋಗಾವಕಾಶ ವಿಸ್ತರಣೆ ಮತ್ತು ನಗರ ಬೀದಿ ವ್ಯಾಪಾರಿಗಳಿಗೆ ಯೋಜನೆಗಳ ಅನುಕೂಲಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ, ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಪಾತ್ರವನ್ನು ಸ್ಮರಿಸಿದ ಪ್ರಧಾನಿ, ಬಂಗಾಳವು ಭಾರತೀಯ ಜನಸಂಘದ ಬುನಾದಿಯನ್ನು ಬಲಪಡಿಸಿದೆ ಎಂದರು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿರುವುದು ಅವರ ಕನಸಿನ ಸಾಕಾರವಾಗಿದ್ದು, ಈಗ ಬಂಗಾಳದ ಅಭಿವೃದ್ಧಿ ಮತ್ತು ನಿರಾಶ್ರಿತರ ಸಮಸ್ಯೆ ಪರಿಹಾರವೂ ಬಿಜೆಪಿ ಗುರಿಯಾಗಿದೆ ಎಂದು ಹೇಳಿದರು.
ಕೊಲ್ಕತ್ತಾವನ್ನು ಅಭಿವೃದ್ಧಿಪಡಿಸುವ ಭರವಸೆಗಳನ್ನು ನೀಡಿದ ಟಿಎಂಸಿ ಆಡಳಿತದ ವಿರುದ್ಧವೂ ಮೋದಿ ಕಿಡಿಕಾರಿದರು. “ಲಂಡನ್ನಂತೆ ಮಾಡುವುದಾಗಿ ಹೇಳಿ, ನಗರವನ್ನು ದುಸ್ಥಿತಿಗೆ ತಳ್ಳಿದ್ದಾರೆ,” ಎಂದು ಆರೋಪಿಸಿದರು.
“ಅಂಗ, ಬಂಗ ಮತ್ತು ಕಳಿಂಗ” ಎಂಬ ಉಲ್ಲೇಖದ ಮೂಲಕ ಬಿಹಾರ ಮತ್ತು ಒಡಿಶಾದಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲವನ್ನು ನೆನಪಿಸಿದ ಮೋದಿ, ಈಗ ಬಂಗಾಳದ ಸರದಿ ಬಂದಿದೆ ಎಂದರು. 21ನೇ ಶತಮಾನದಲ್ಲಿ ಬಂಗಾಳದ ಪುನರ್ನಿರ್ಮಾಣಕ್ಕೆ “ವಂದೇ ಮಾತರಂ” ಮಂತ್ರವಾಗಿದ್ದು, ಅಭಿವೃದ್ಧಿ ಹೊಂದಿದ ಭಾರತದ ಗುರಿಯಲ್ಲಿ ಬಂಗಾಳದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa