ಗಾಳಿ ಅಬ್ಬರಕ್ಕೆ ಮೊಬೈಲ್ ಟವರ್ ಕುಸಿತ, ತಪ್ಪಿದ ಅನಾಹುತ
ಗದಗ, 27 ಏಪ್ರಿಲ್ (ಹಿ.ಸ.) : ಆ್ಯಂಕರ್ :- ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಸಂಜೆ ಬೀಸಿದ ಬಿರುಸಿನ ಗಾಳಿ ಹಾಗೂ ಮಳೆಗೆ ಮನೆಮೇಲೆ ಅಳವಡಿಸಿದ್ದ ಖಾಸಗಿ ಕಂಪನಿಯ ಮೊಬೈಲ್ ಟವರ್ ಕಂಬ ಧರೆಗುರುಳಿದ ಘಟನೆ ಜಾಗೃತ್ ಸರ್ಕಲ್ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಮನೆ ಹಾಗೂ
ಫೋಟೋ


ಗದಗ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ :- ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಸಂಜೆ ಬೀಸಿದ ಬಿರುಸಿನ ಗಾಳಿ ಹಾಗೂ ಮಳೆಗೆ ಮನೆಮೇಲೆ ಅಳವಡಿಸಿದ್ದ ಖಾಸಗಿ ಕಂಪನಿಯ ಮೊಬೈಲ್ ಟವರ್ ಕಂಬ ಧರೆಗುರುಳಿದ ಘಟನೆ ಜಾಗೃತ್ ಸರ್ಕಲ್ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಮನೆ ಹಾಗೂ ಸುತ್ತಮುತ್ತಲಿನ ಆಸ್ತಿಗೆ ಭಾರೀ ಹಾನಿಯಾಗಿದೆ.

ಜಾಗೃತ್ ಸರ್ಕಲ್ನಲ್ಲಿರುವ ಮನೆಯ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿದ್ದ ಟವರ್ ಬಲವಾದ ಗಾಳಿಯ ಹೊಡೆತಕ್ಕೆ ತುತ್ತಾಗಿ ಕುಸಿದು ಬಿದ್ದಿದೆ. ಟವರ್ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಗಂಭೀರವಾಗಿ ಹಾನಿಗೊಳಗಾಗಿದ್ದು, ಮನೆಯ ಮುಂದಿದ್ದ ಎರಡು ಚಕ್ರ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ. ಸ್ಥಳೀಯರ ಪ್ರಕಾರ, ಘಟನೆ ಸಂಭವಿಸಿದ ವೇಳೆ ಭಾರೀ ಶಬ್ದ ಉಂಟಾಗಿ ಜನರು ಆತಂಕಗೊಂಡು ಮನೆಗಳಿಂದ ಹೊರಬಂದರು.

ಇದೇ ವೇಳೆ, ಟವರ್ ಕುಸಿತದಿಂದ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಕಡಿತದಿಂದ ವ್ಯಾಪಾರ ಚಟುವಟಿಕೆಗಳಿಗೂ ತೊಂದರೆ ಉಂಟಾಗಿದ್ದು, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಘಟನೆಯಿಂದಾಗಿ ಜಾಗೃತ್ ಸರ್ಕಲ್ ಸುತ್ತಮುತ್ತ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ರಸ್ತೆ ಮಧ್ಯಭಾಗದಲ್ಲಿ ಟವರ್ ಭಾಗಗಳು ಬಿದ್ದಿದ್ದರಿಂದ ವಾಹನಗಳು ಸಾಗಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳೀಯರು ಹಾಗೂ ಸಂಬಂಧಿತ ಸಿಬ್ಬಂದಿ ಟವರ್ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರು.

ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿದ್ರಾಯ್ ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟವರ್ ಅಳವಡಿಕೆ ಸಂಬಂಧ ನಿಯಮಗಳನ್ನು ಪಾಲಿಸಲಾಗಿದೆವೆಯೇ ಎಂಬುದನ್ನು ಪರಿಶೀಲಿಸಲಾಗುವುದು. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಕಂಪನಿಗೆ ನೋಟಿಸ್ ನೀಡಲಾಗುವುದು ಹಾಗೂ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಇನ್ನು ಗಾಳಿ-ಮಳೆಯ ಅಬ್ಬರಕ್ಕೆ ಪಟ್ಟಣದ ವಿವಿಧ ಭಾಗಗಳಲ್ಲಿ ಹಲವಾರು ಮರಗಳು ನೆಲಕ್ಕುರುಳಿದ್ದು, ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ನೀರು ಮನೆಗಳೊಳಗೂ ನುಗ್ಗಿರುವ ಬಗ್ಗೆ ವರದಿಯಾಗಿದೆ.

ಸ್ಥಳೀಯರು ಗಾಳಿ-ಮಳೆಯ ತೀವ್ರತೆಗೆ ಆತಂಕ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮನೆಮೇಲೆ ಟವರ್ ಅಳವಡಿಸುವಾಗ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.

ಒಟ್ಟಿನಲ್ಲಿ, ಮುಂಡರಗಿ ಪಟ್ಟಣದಲ್ಲಿ ಗಾಳಿ-ಮಳೆಯ ಅಬ್ಬರದಿಂದ ಸಂಭವಿಸಿದ ಈ ಘಟನೆ ಜನರಲ್ಲಿ ಭೀತಿ ಉಂಟು ಮಾಡಿದ್ದು, ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ತಡೆಯಲು ಸಂಬಂಧಿತ ಇಲಾಖೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande