
ಬಾಗಲಕೋಟೆ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣ ಸಂಖ್ಯೆ 18/2026ಕ್ಕೆ ಸಂಬಂಧಿಸಿದಂತೆ ಕಾಣೆಯಾಗಿದ್ದ ಮಹಿಳೆಯನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿ, ಸುರಕ್ಷಿತವಾಗಿ ಪಾಲಕರೊಂದಿಗೆ ಸೇರಿಸಿದ್ದಾರೆ.
ಇತ್ತೀಚೆಗೆ ಮಹಿಳೆ ಕಾಣೆಯಾಗಿರುವ ಕುರಿತು ಕುಟುಂಬಸ್ಥರು ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಮಹಿಳೆಯ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ತಾಂತ್ರಿಕ ಮಾಹಿತಿಗಳ ಸಹಾಯದಿಂದ ಹಾಗೂ ಸ್ಥಳೀಯ ಮಾಹಿತಿದಾರರ ಸಹಕಾರದಿಂದ ಮಹಿಳೆಯ ಸುಳಿವು ಪತ್ತೆಹಚ್ಚಿದ ಪೊಲೀಸರು, ಆಕೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತರಲಾಯಿತು. ನಂತರ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮಹಿಳೆಯನ್ನು ಆಕೆಯ ಪಾಲಕರಿಗೆ ಒಪ್ಪಿಸಲಾಯಿತು.
ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಇಲಾಖೆಯ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದ್ದಾರೆ. ಸಾರ್ವಜನಿಕರು ತಮ್ಮ ಕುಟುಂಬದ ಸದಸ್ಯರ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಬೇಕು ಮತ್ತು ಯಾವುದೇ ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande