ಉಚ್ಚಾಟನೆ ತೂಗುಗತ್ತಿಯಿಂದ ಬಚಾವ್ ; ಕಮತಗಿಯ ಮೂವರು ಕಾಂಗ್ರೆಸ್ ಮುಖಂಡರ ಅಮಾನತು
ಬಾಗಲಕೋಟೆ, 27 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ವಿಧಾನ ಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಉಚ್ಚಾಟನೆ ಭೀತಿ ಎದುರಿಸುತ್ತಿದ್ದ ಕಮತಗಿ ಭಾಗದ ಮೂವರು ಕಾಂಗ್ರೆಸ್ ಮುಖಂಡರು ಅಂತಿಮವಾಗಿ ಉಚ್ಚಾಟನೆ ತೂಗುಗತ್ತಿಯಿಂದ ಪಾರಾಗಿ, ಪಕ
ಉಚ್ಚಾಟನೆ


ಬಾಗಲಕೋಟೆ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ವಿಧಾನ ಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಉಚ್ಚಾಟನೆ ಭೀತಿ ಎದುರಿಸುತ್ತಿದ್ದ ಕಮತಗಿ ಭಾಗದ ಮೂವರು ಕಾಂಗ್ರೆಸ್ ಮುಖಂಡರು ಅಂತಿಮವಾಗಿ ಉಚ್ಚಾಟನೆ ತೂಗುಗತ್ತಿಯಿಂದ ಪಾರಾಗಿ, ಪಕ್ಷದಿಂದ ಅಮಾನತು ಕ್ರಮಕ್ಕೆ ಒಳಗಾಗಿದ್ದಾರೆ.

ಅಮಾನತು ಆದೇಶ :

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ಅವರು ಕಮತಗಿ ಪಪಂ ಸದಸ್ಯರಾದ ರಮೇಶ ಜಮಖಂಡಿ, ಗುರು ಪಾಟೀಲ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ದೂರು ಸಲ್ಲಿಕೆ :

ವಿಧಾನ ಸಭೆ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ, ಬಾಗಲಕೋಟೆ ವಿಧಾನ ಸಭೆ ಕ್ಷೇತ್ರದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಂ. ರಾಂಪೂರ ಹಾಗೂ ಕಮತಗಿ ಪಪಂ ಸದಸ್ಯರು ಜಿಲ್ಲಾಧ್ಯಕ್ಷರಿಗೆ ಲಿಖಿತ ದೂರು ಸಲ್ಲಿಸಿದ್ದರು.

ನೋಟಿಸ್ ಮತ್ತು ಉತ್ತರ:

ದೂರಿನ ಆಧಾರದ ಮೇಲೆ ಮೂವರಿಗೂ ಮೂರು ದಿನಗಳ ಗಡುವಿನೊಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ಗೆ ಮೂವರು ಮುಖಂಡರು ಲಿಖಿತ ಉತ್ತರ ನೀಡಿದರೂ, ಅವು ಆಧಾರರಹಿತವೆಂದು ಪರಿಗಣಿಸಿ ಭಾನುವಾರ ಸಂಜೆ ಅಮಾನತು ಆದೇಶ ಜಾರಿಗೊಳಿಸಲಾಗಿದೆ.

ವಿರೋಧಿಗಳಿಗೆ ನಿರಾಸೆ :

ಮೂವರ ವಿರುದ್ಧ ಉಚ್ಚಾಟನೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಿರೋಧಿಗಳಿಗೆ ನಿರಾಸೆಯಾಗಿದೆ. ಉಚ್ಚಾಟನೆ ಬದಲು ಅಮಾನತು ಕ್ರಮ ಕೈಗೊಳ್ಳಲಾಗಿದ್ದು, ಅವರು ತಾತ್ಕಾಲಿಕವಾಗಿ ದೊಡ್ಡ ಶಿಕ್ಷೆಯಿಂದ ಪಾರಾಗಿದ್ದಾರೆ.

ರಾಜಕೀಯ ಹಿನ್ನೆಲೆ :

ಕಮತಗಿ ಕಾಂಗ್ರೆಸ್ ಪಾಳೆಯದಲ್ಲಿನ ಕೆಲವು ಪ್ರಬಲ ಗುಂಪುಗಳು ಕಳೆದ ಒಂದು ವರ್ಷದಿಂದಲೇ ಈ ಮುಖಂಡರನ್ನು ಪಕ್ಷದಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದವು. ಈ ಹಿನ್ನೆಲೆ ರಮೇಶ ಜಮಖಂಡಿ ಅವರನ್ನು ಅವಿಶ್ವಾಸ ಗೊತ್ತುವಳಿಯ ಮೂಲಕ ಪಪಂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಲ್ಲಿ ಸಹ ಯಶಸ್ವಿಯಾಗಿದ್ದರು.

ತಟಸ್ಥ ನಿಲುವು ವಿವಾದಕ್ಕೆ ಕಾರಣ :

ಉಪಚುನಾವಣೆಯಲ್ಲಿ ತಮಗೆ ನಿರ್ಲಕ್ಷ್ಯವಾಗಿದೆ ಎಂಬ ಅಸಮಾಧಾನದಿಂದ ಮೂವರು ತಟಸ್ಥ ನಿಲುವು ತಾಳಿದ್ದರು. ಇದೇ ವಿಷಯವನ್ನು ಅಸ್ತ್ರವಾಗಿ ಬಳಸಿಕೊಂಡ ವಿರೋಧಿಗಳು ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡಿ ದೂರು ನೀಡಿದ್ದರು.

ಪ್ರಭಾವದ ರಾಜಕೀಯ :

ಪಕ್ಷದ ಪ್ರಭಾವಿ ನಾಯಕರೊಂದಿಗೆ ಹೊಂದಾಣಿಕೆ ಹೊಂದಿದ್ದ ಕಾರಣ ಉಚ್ಚಾಟನೆ ಕ್ರಮ ತಡೆಯಲು ಪ್ರಭಾವ ಬೀರಲಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಅಂತಿಮವಾಗಿ ಉಚ್ಚಾಟನೆ ಬದಲಾಗಿ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರ ಅಮಾನತು ಕ್ರಮವನ್ನು ಜಾಣ್ಮೆಯ ರಾಜಕೀಯ ನಡೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande