
ನವದೆಹಲಿ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸುವ ಉದ್ದೇಶದಿಂದ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ)ಕ್ಕೆ ಸೋಮವಾರ ಸಹಿ ಹಾಕಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ನ್ಯೂಜಿಲೆಂಡ್ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್ಲೇ ಅವರ ಸಮ್ಮುಖದಲ್ಲಿ ನವದೆಹಲಿಯಲ್ಲಿ ಒಪ್ಪಂದಕ್ಕೆ ಮುದ್ರೆ ಬಿದ್ದಿತು.
ಈ ಒಪ್ಪಂದದಡಿ ಭಾರತದ 100 ಶೇಕಡಾ ರಫ್ತುಗಳಿಗೆ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಸುಂಕಮುಕ್ತ ಪ್ರವೇಶ ಲಭಿಸಲಿದೆ. ಎಲ್ಲಾ ಉತ್ಪನ್ನ ವರ್ಗಗಳನ್ನು ಒಳಗೊಂಡಿರುವ ಈ ಕ್ರಮವು ಜವಳಿ, ಉಡುಪು, ಚರ್ಮ, ಪಾದರಕ್ಷೆ, ರತ್ನ–ಆಭರಣ, ಎಂಜಿನಿಯರಿಂಗ್ ಸರಕುಗಳು ಹಾಗೂ ಸಂಸ್ಕರಿತ ಆಹಾರ ಕ್ಷೇತ್ರಗಳಿಗೆ ಮಹತ್ವದ ಉತ್ತೇಜನ ನೀಡಲಿದೆ. ಇದರಿಂದ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಹಾಗೂ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆ ಇದೆ.
ಐತಿಹಾಸಿಕ ಎಫ್ಟಿಎ ಒಪ್ಪಂದವು ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 5 ಬಿಲಿಯನ್ ಡಾಲರ್ ಮಟ್ಟಕ್ಕೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಇದರಿಂದ ಭಾರತೀಯ ವೃತ್ತಿಪರರಿಗೆ ನ್ಯೂಜಿಲೆಂಡ್ನಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ನ್ಯೂಜಿಲೆಂಡ್ ಭಾರತೀಯ ಉತ್ಪನ್ನಗಳಾದ ಸೆರಾಮಿಕ್ಸ್, ರತ್ನಗಂಬಳಿಗಳು, ವಾಹನ ಬಿಡಿಭಾಗಗಳ ಮೇಲೆ ಸುಮಾರು 10 ಶೇಕಡಾ ಸುಂಕ ವಿಧಿಸುತ್ತಿತ್ತು. ಇದೀಗ ಸುಂಕಮುಕ್ತ ಪ್ರವೇಶದಿಂದ ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಲಿವೆ.
ಇದೇ ವೇಳೆ, ಭಾರತ ತನ್ನ ಉತ್ಪಾದನಾ ವಲಯಕ್ಕೆ ಅಗತ್ಯವಿರುವ ಮರದ ಲಾಗ್ಗಳು, ಕೋಕಿಂಗ್ ಕಲ್ಲಿದ್ದಲು ಹಾಗೂ ಲೋಹದ ಸ್ಕ್ರ್ಯಾಪ್ಗಳಂತಹ ಕಚ್ಚಾ ವಸ್ತುಗಳನ್ನು ಸುಂಕ ರಹಿತವಾಗಿ ಪಡೆಯಲಿದೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವ ಜೊತೆಗೆ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಲಿದೆ.
ಒಪ್ಪಂದದ ಪ್ರಕಾರ, ಭಾರತವು 70 ಶೇಕಡಕ್ಕೂ ಹೆಚ್ಚು ಸುಂಕದ ವಿಭಾಗಗಳಲ್ಲಿ ರಿಯಾಯಿತಿ ನೀಡಿದ್ದು, ದ್ವಿಪಕ್ಷೀಯ ವ್ಯಾಪಾರದ ಮೌಲ್ಯದ 95 ಶೇಕಡಾವರೆಗೆ ಇದರ ವ್ಯಾಪ್ತಿ ವಿಸ್ತರಿಸುತ್ತದೆ. ಆದರೆ ಹಾಲು, ಕೃಷಿ ಉತ್ಪನ್ನಗಳು, ಸಕ್ಕರೆ, ಕೊಬ್ಬು–ತೈಲಗಳು ಸೇರಿದಂತೆ ಸೂಕ್ಷ್ಮ ಕ್ಷೇತ್ರಗಳನ್ನು ರಕ್ಷಿಸಲು ಸುಮಾರು 97 ಶೇಕಡಾ ಸುಂಕದ ವರ್ಗಗಳನ್ನು ಹೊರಗಿಡಲಾಗಿದೆ.
ಇದಲ್ಲದೆ, ನ್ಯೂಜಿಲೆಂಡ್ನ ಕೆಲವು ಉತ್ಪನ್ನಗಳಾದ ವೈನ್, ಔಷಧಿಗಳು, ಪಾಲಿಮರ್, ಕಬ್ಬಿಣ–ಉಕ್ಕು ಉತ್ಪನ್ನಗಳಿಗೆ ಸುಂಕ ರಿಯಾಯಿತಿ ಲಭಿಸಲಿದೆ. ಕೆಲವು ಉತ್ಪನ್ನಗಳನ್ನು ಕೋಟಾ ವ್ಯವಸ್ಥೆಯಡಿ ಒಳಪಡಿಸಲಾಗಿದೆ.
ಈ ಒಪ್ಪಂದದ ಮೂಲಕ ಭಾರತದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಸಾಧ್ಯತೆಯನ್ನೂ ಉಲ್ಲೇಖಿಸಲಾಗಿದೆ. 2024ರಲ್ಲಿ ಭಾರತ–ನ್ಯೂಜಿಲೆಂಡ್ ನಡುವಿನ ಒಟ್ಟು ದ್ವಿಪಕ್ಷೀಯ ವ್ಯಾಪಾರ ಸುಮಾರು 2.40 ಬಿಲಿಯನ್ ಡಾಲರ್ ಆಗಿತ್ತು. ಹೊಸ ಎಫ್ಟಿಎ ಜಾರಿಗೆ ಬಂದ ನಂತರ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳು ಮತ್ತಷ್ಟು ಬಲಪಡಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa