

ಬಳ್ಳಾರಿ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಲ್ಯಾಣ ಕರ್ನಾಟಕ ಭಾಗದ ಕುರುಬ ಸಮುದಾಯಕ್ಕೆ ಅದರಲ್ಲೂ ಮೂರುಬಾರಿ ಶಾಸಕರಾಗಿರುವ ಕೊಪ್ಪಳದ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಬಳ್ಳಾರಿ ಜಿಲ್ಲಾ ಕುರುಬ ಸಮಾಜ ಆಗ್ರಹಿಸಿದೆ.
ಬಳ್ಳಾರಿ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷರಾಗಿರುವ ಡಾ. ಗಾದಲಿಂಗನಗೌಡ ಅವರ ನೇತೃತ್ವದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಕುರುಬ ಸಮಾಜದ ಮುಖಂಡರು, ಕುರುಬ ಸಮಾಜವು ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಶೇ. 90 ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾವಣೆ ಮಾಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದೇವೆ. ಆದರೆ, ಕಾಂಗ್ರೆಸ್ನಲ್ಲಿ ಕುರುಬ ಸಮಾಜಕ್ಕೆ ಸೂಕ್ತ ಸ್ಥಾನಮಾನ - ಗೌರವದ ಹುದ್ದೆಗಳು ಸಿಗುತ್ತಿಲ್ಲ. ಸರ್ಕಾರದಲ್ಲೂ ಕುರುಬರನ್ನು ಅಧಿಕಾರದಿಂದ ದೂರವೇ ಇರಿಸಲಾಗಿದೆ ಎಂದು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕುರುಬ ಸಮಾಜದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದನ್ನೇ ನೆಪವಾಗಿ ಕುರುಬರನ್ನು ಸಚಿವ ಸ್ಥಾನದಿಂದ ದೂರವೇ ಇರಿಸಲಾಗಿದೆ. ಅದರಲ್ಲೂ, ಕಲ್ಯಾಣ ಕರ್ನಾಟಕ ಭಾಗದ ಕುರುಬ ಜನಾಂಗದ ಶಾಸಕರಿಗೆ ಸಚಿವ ಸ್ಥಾನ ಮರೀಚಿಕೆಯಾಗಿದೆ. ನಮ್ಮ ಕುರುಬ ಸಮಾಜಕ್ಕೆ ವಿಧಾನಪರಿಷತ್ ಸ್ಥಾನ ಸೇರಿ, ಸಚಿವ ಸ್ಥಾನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಲ್ಲದೇ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಸೇರಿ ವಿವಿಧ ರಾಜ್ಯ ಮತ್ತು ಸ್ಥಳೀಯ ಮಟ್ಟದ ನಿಗಮ - ಮಂಡಳಿಗಳಲ್ಲಿ ಅಧ್ಯಕ್ಷ ಹುದ್ದೆಯನ್ನು ಆದ್ಯತೆ ಮೇರೆಗೆ ನೀಡಬೇಕು ಎಂದು ಅವರು ಕೋರಿದ್ದಾರೆ.
ಬೆಣಕಲ್ಲು ಬಸವರಾಜ ಗೌಡ, ಬಿ.ಕೆ. ಕೆರಕೋಡಪ್ಪ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್