
ನವದೆಹಲಿ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಬಲ ಮತ್ತಷ್ಟು ಹೆಚ್ಚಾಗಿದೆ. ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಏಳು ಸಂಸದರಿಗೆ ರಾಜ್ಯ ಸಭೆಯ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ಅವರು ಅಧಿಕೃತ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆ ೧೦೬ರಿಂದ ೧೧೩ಕ್ಕೆ ಏರಿಕೆಯಾಗಿದೆ.
ಸೋಮವಾರ ರಾಜ್ಯ ಸಭಾ ಕಾರ್ಯಾಲಯವು ಸದನದ ಎಲ್ಲಾ ಪಕ್ಷಗಳ ಸಂಸದರ ನವೀಕೃತ ಪಟ್ಟಿಯನ್ನು ಪ್ರಕಟಿಸಿದ್ದು, ಈ ಏಳು ಸಂಸದರನ್ನು ಬಿಜೆಪಿ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಮೇಲ್ಮನೆಯಲ್ಲಿ ಬಿಜೆಪಿಗೆ ಮತ್ತಷ್ಟು ರಾಜಕೀಯ ಬಲ ಸಿಕ್ಕಂತಾಗಿದೆ.
ಬಿಜೆಪಿಗೆ ಸೇರ್ಪಡೆಯಾದ ಸಂಸದರಲ್ಲಿ ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ವಿಕ್ರಮಜಿತ್ ಸಿಂಗ್ ಸಾಹ್ನಿ, ಸ್ವಾತಿ ಮಾಲಿವಾಲ್ ಮತ್ತು ರಾಜಿಂದರ್ ಗುಪ್ತಾ ಸೇರಿದ್ದಾರೆ. ಇವರು ಈಗ ಬಿಜೆಪಿ ಸಂಸದೀಯ ಪಕ್ಷದ ಸದಸ್ಯರಾಗಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಬೆಳವಣಿಗೆಯನ್ನು ದೃಢಪಡಿಸಿ, ರಾಜ್ಯಸಭಾ ಸಭಾಪತಿ ಈ ವಿಲೀನಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಸದರು ಸದನದಲ್ಲಿ ಶಿಸ್ತಿನಿಂದ ನಡೆದುಕೊಂಡಿರುವುದನ್ನು ಅವರು ಶ್ಲಾಘಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಎಲ್ಲರಿಗೂ ಸ್ವಾಗತವಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಪಕ್ಷಗಳ ಮೈತ್ರಿಕೂಟವನ್ನು ಟೀಕಿಸಿ, “ತುಂಡು-ತುಂಡು ಮೈತ್ರಿಗೆ ವಿದಾಯ” ಎಂದೂ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa