
ಬಳ್ಳಾರಿ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : `ನಾರಿ ಶಕ್ತಿ ಮಸೂದೆ - 2026'ರ ನೆಪದಲ್ಲಿ ಕೇಂದ್ರ ಸರ್ಕಾರವು ದೇಶದ ಮಹಿಳೆಯರು ಮತ್ತು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಶಾಸಕಿ ಈ. ಅನ್ನಪೂರ್ಣ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ಶೇ. 33ರ ಮಹಿಳಾ ಮೀಸಲಾತಿ ಮಸೂದೆಯನ್ನು ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗಲೇ ಸಂಸತ್ತಿನಲ್ಲಿ ಪಾಸು ಮಾಡಲಾಗಿತ್ತು. ಆದರೆ, ದಕ್ಷಿಣದ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿಯನ್ನು ಪುನಃ ಲೋಕಸಭೆಯಲ್ಲಿ ಮಂಡನೆ ಮಾಡಿ, ಸಂವಿಧಾನ ತಿದ್ದುಪಡಿಗೆ ವಿಫಲಯತ್ನ ನಡೆಸಿದ್ದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಅವರು ಆರೋಪಿಸಿದರು.
2014ರಿಂದಲೇ ದೇಶವನ್ನು ಆಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್ಡಿಎ ಯಾವ ಕಾರಣಕ್ಕಾಗಿ ಮಹಿಳ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿಲ್ಲ? ದಕ್ಷಿಣ ಭಾರತದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ವೈಫಲ್ಯಗಳನ್ನು ಮರೆಮಾಚಲು - ಚುನಾವಣಾ ವಿಷಯಗಳನ್ನು ದಿಕ್ಕುತಪ್ಪಿಸಲು - ಮತದಾರರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಈ ವಿಷಯದ ವಿವಾದವನ್ನು ರಾಷ್ಟ್ರವ್ಯಾಪ್ತಿ ಸಜೀವವಾಗಿ ಇರುವಂತೆ ಮಾಡುತ್ತಿದೆ ಎಂದು ಟೀಕಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ, ಮುಖಂಡರಾದ ಕಮಲಾ ಮರಿಸ್ವಾಮಿ, ನಾಗಮಣಿ ಜಿಂಕಲ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್