
ಕೊಪ್ಪಳ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವುದು ಮತ್ತು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಕನಕಗಿರಿ ತಾಲೂಕಿನ ಜೀರಾಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಜ್ಞರು ಹಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ವನ್ನೂರು ಅವರು ಮಾತನಾಡಿ, 18 ವರ್ಷದೊಳಗಿನ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ತಂದಿರುವ ಪೋಕ್ಸೊ ಕಾಯ್ದೆ-2012 ರ ಬಗ್ಗೆ ವಿವರಿಸಿದರು. ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕನಿಷ್ಠ 20 ವರ್ಷದಿಂದ ಜೀವಿತಾವಧಿಯವರೆಗೆ ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.
ಗ್ರಾಮ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಲು ಗ್ರಾಮ ಮಟ್ಟದ “ಮಕ್ಕಳ ರಕ್ಷಣಾ ಸಮಿತಿಯಲ್ಲಿ ಚರ್ಚಿಸಿ, ಮಕ್ಕಳ ಹಕ್ಕುಗಳು, ಕಾನೂನುಗಳ ಮತ್ತು ಮಕ್ಕಳ ಸುರಕ್ಷತೆ ಕುರಿತು ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ, ತನ್ಮೂಲಕ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ, ಬಾಲ್ಯವಿವಾಹಗಳನ್ನು ತಡೆದು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ ಕಾಶಿಮಠ ಅವರು ಮಾತನಾಡಿ, ತಾಯಿ-ಶಿಶು ಮರಣ ಪ್ರಮಾಣ ತಗ್ಗಿಸಲು ಬಾಲ್ಯವಿವಾಹ ತಡೆಯುವುದು ಅನಿವಾರ್ಯ. ಕರ್ನಾಟಕ ರಾಜ್ಯ ತಿದ್ದುಪಡಿ ಕಾಯ್ದೆಯಂತೆ ಬಾಲ್ಯವಿವಾಹಗಳು ಅಸಿಂಧುಗೊ0ಡಿದ್ದು, ಇಂತಹ ವಿವಾಹ ಆಯೋಜಿಸುವವರಿಗೆ ಕನಿಷ್ಠ 1 ರಿಂದ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರಾಳ ಗ್ರಾ.ಪಂ ಆಡಳಿತಾಧಿಕಾರಿ ಅಭಿಲಾಷ ಅವರು ವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದುಸ್ವಾಮಿ ದೊಡ್ಡಮನಿ, ವಲಯ ಸಂಪನ್ಮೂಲ ವ್ಯಕ್ತಿಗಳಾದ ವಲಯ ಗೀತಾ, ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಕೊಟ್ರೇಶ, ಸಹಾಯಕ ಪೊಲೀಸ್ ಆರಕ್ಷಕ ನಿರೀಕ್ಷಕರಾದ ನಿಂಗಪ್ಪ, ಶಿಶು ಕನಕಗಿರಿ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಅಂಗನವಾಡಿ ಮೇಲ್ವಿಚಾರಕಿ ಚಂದ್ರಕಲಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಜೀರಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ವಂದಿಸಿದರು ಮತ್ತು ಕುಮಾರಿ ಯಮುನಾ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್