ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಧಾರವಾಡ, 26 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ, ಆಧುನಿಕ ತಂತ್ರಜ್ಞಾನ ಬಳಸಿ ಶಾಶ್ವತವಾಗಿ ಸಂರಕ್ಷಿಸುವ ಮಹತ್ವಾಕಾಂಕ್ಷಿ ಸಮೀಕ್ಷೆ ಕಾರ್ಯ ಜಿಲ್ಲೆಯಲ್ಲ
ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್.


ಧಾರವಾಡ, 26 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ, ಆಧುನಿಕ ತಂತ್ರಜ್ಞಾನ ಬಳಸಿ ಶಾಶ್ವತವಾಗಿ ಸಂರಕ್ಷಿಸುವ ಮಹತ್ವಾಕಾಂಕ್ಷಿ ಸಮೀಕ್ಷೆ ಕಾರ್ಯ ಜಿಲ್ಲೆಯಲ್ಲಿ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಜಿಲ್ಲೆಯಲ್ಲಿ ಯಾರ ಬಳಿ ಹಳೆಯ ಕೈಬರಹಗಳು, ಹಸ್ತಪ್ರತಿಗಳು ಅಥವಾ ದಾಖಲೆಗಳು ಇದ್ದರೂ ಅವುಗಳ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದ್ದಾರೆ. ಸಮೀಕ್ಷೆದಾರರು ನೇರವಾಗಿ ಭೇಟಿ ನೀಡಿ ಅವುಗಳನ್ನು ದಾಖಲಿಸಿಕೊಳ್ಳಲಿದ್ದಾರೆ ಎಂದರು.

ಈ ಯೋಜನೆಯಡಿ ಐತಿಹಾಸಿಕ ದಾಖಲೆಗಳ ಸಮೀಕ್ಷೆ, ಸಂರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆ ಸೇರಿದಂತೆ ಸಮಗ್ರ ಕಾರ್ಯ ಕೈಗೊಳ್ಳಲಾಗುತ್ತದೆ. ಇದರ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದು ರಾಷ್ಟ್ರೀಯ ವೇದಿಕೆಯಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

ಜ್ಞಾನ ಸಂಪತ್ತನ್ನು ಭವಿಷ್ಯದ ಪೀಳಿಗೆಗೆ ಉಳಿಸುವ ಉದ್ದೇಶದಿಂದ, ಹಸ್ತಪ್ರತಿಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಿ, ರಾಷ್ಟ್ರೀಯ ಡಿಜಿಟಲ್ ರೆಪೊಸಿಟರಿಯಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಇದಕ್ಕಾಗಿ ವಿಶೇಷ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಸಂಗ್ರಹವಾಗುವ ಮಾಹಿತಿಯನ್ನು ವಿಶ್ವ ಮಟ್ಟದಲ್ಲಿ ಹಂಚಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಸಮೀಕ್ಷೆ ಕಾರ್ಯವನ್ನು ಮೇಲ್ವಿಚಾರಣೆ ಮಾಡಲಿದೆ.

ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಗಳು, ವಸ್ತುಸಂಗ್ರಹಾಲಯಗಳು, ಮಠಗಳು, ಸಂಘ-ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಇರುವ ಹಸ್ತಪ್ರತಿಗಳನ್ನು ದಾಖಲಿಸಲು ಎಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಜಿಲ್ಲಾ ಸಂಯೋಜಕರು ನೇಮಕ:

ಈ ಯೋಜನೆಗೆ ಜಿಲ್ಲಾ ಸಂಯೋಜಕರಾಗಿ ವಿದ್ವಾನ್ ಬಸವರಾಜ ಆರೇರ್, ಡಾ. ಶ್ರೀಧರ ಇನಾಮದಾರ್ ಹಾಗೂ ಸಮಿತಿ ಸದಸ್ಯರಾಗಿ ಡಾ. ಗಿರೀಧರ ಕಿನ್ನಾಳ, ಪಂಡಿತ ಪೂರ್ಣಪ್ರಜ್ಞಾ ಮಳಗಿ, ಡಾ. ವೆಂಕಟೇಶ ಆಚಾರ್ಯ ಬಿ.ಡಿ. ಮತ್ತು ಡಾ. ಪದ್ಮಾವತಿ ಎಂ. ಸಿಂಗರಿ ಅವರನ್ನು ನೇಮಕ ಮಾಡಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶ:

ಬೆಂಗಳೂರು ಕೇಂದ್ರಿತ ಸಂಸ್ಕೃತ ವಿಶ್ವವಿದ್ಯಾಲಯ, ಮೈಸೂರು ಸಂಸ್ಕೃತಿ ಸಂಸ್ಥೆ ಹಾಗೂ ಇತರೆ ಕೇಂದ್ರಗಳನ್ನು ಕ್ಲಸ್ಟರ್ ಕೇಂದ್ರಗಳಾಗಿ ಗುರುತಿಸಿ, ಹಸ್ತಪ್ರತಿಗಳ ಸಂಗ್ರಹ ಮತ್ತು ಸಂರಕ್ಷಣೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಪುರಾತತ್ವ ಮತ್ತು ಪರಂಪರೆ ಇಲಾಖೆಯನ್ನು ನೋಡಲ್ ಇಲಾಖೆಯಾಗಿ ನೇಮಿಸಿ, ಯೋಜನೆಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಬೆಂಬಲ ನೀಡಲಾಗಿದೆ.

ಕೇಂದ್ರ ಬಜೆಟ್ನಲ್ಲಿಯೂ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ವಿಶೇಷ ಅನುದಾನ ಮೀಸಲಿಟ್ಟಿರುವ ಹಿನ್ನೆಲೆ, ಈ ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಯೋಜನೆಯು ದೇಶವ್ಯಾಪಿ ಚಳುವಳಿಯ ರೂಪದಲ್ಲಿ ನಡೆಯುತ್ತಿದ್ದು, ಕರ್ನಾಟಕ ರಾಜ್ಯವು ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಮುನ್ನಡೆಯುವ ಗುರಿಯನ್ನು ಹೊಂದಿದೆ. ಇದರ ಮೂಲಕ ರಾಜ್ಯದ ಪಾರಂಪರಿಕ ಜ್ಞಾನ ಸಂಪತ್ತನ್ನು ವಿಶ್ವದ ಮಟ್ಟದಲ್ಲಿ ಪರಿಚಯಿಸುವುದು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande