
ಹೂಗ್ಲಿ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ದಾಖಲೆ ಮಟ್ಟದ ಮತದಾನವು ರಾಜ್ಯದಲ್ಲಿ ಬದಲಾವಣೆಯನ್ನು ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಮುಂದಿನ ಹಂತಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಲು ಜನತೆಗೆ ಕರೆ ನೀಡಿದ್ದಾರೆ.
ಹೂಗ್ಲಿ ಜಿಲ್ಲೆಯ ಹರಿಪಾಲ್ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲೇ ಮತದಾನದ ದಾಖಲೆ ಮುರಿದಿದೆ, ಇದನ್ನು ಮುಂದಿನ ಹಂತಗಳಲ್ಲಿ ಮತ್ತಷ್ಟು ಹೆಚ್ಚಿಸಬೇಕು ಎಂದು ಹೇಳಿದರು.
ಈ ವೇಳೆ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, “ನವನ್ನಾದಿಂದ ಸರ್ಕಾರ ನಡೆಯಬೇಕು, ಆದರೆ ಇಲ್ಲಿ ಗೂಂಡಾಗಳು ಮತ್ತು ಮಸ್ತಾನ್ಗಳು ಆಡಳಿತ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು. ಜನರು ನ್ಯಾಯಕ್ಕಾಗಿ ಮತ್ತೆ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.
ಬಂಗಾಳದ ಮಹನೀಯರಾದ ರಾಜಾ ರಾಮ್ ಮೋಹನ್ ರಾಯ್ ಮತ್ತು ರಾಮಕೃಷ್ಣ ಪರಮಹಂಸ ಅವರನ್ನು ಸ್ಮರಿಸಿದ ಮೋದಿ, ರಾಜ್ಯದ ಅಭಿವೃದ್ಧಿಗೆ ಅವರ ಆದರ್ಶಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.
ಶಿಕ್ಷಣ ಹಗರಣದ ಕುರಿತು ಮಾತನಾಡಿದ ಅವರು, ಟಿಎಂಸಿ ಸಚಿವರು ಸಾವಿರಾರು ಯುವಕರ ಭವಿಷ್ಯ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು. ಕಾನೂನು ಮತ್ತು ಸುವ್ಯವಸ್ಥೆ ದುರ್ಬಲಗೊಂಡಿದ್ದು, 2023ರ ಪಂಚಾಯತ್ ಚುನಾವಣೆ ವೇಳೆ ಕೇಂದ್ರ ಪಡೆಗಳನ್ನು ನಿಯೋಜಿಸಲು ನ್ಯಾಯಾಲಯವೇ ಆದೇಶಿಸಬೇಕಾಯಿತು ಎಂದು ಅವರು ಹೇಳಿದರು.
ಸಂದೇಶ್ಖಾಲಿ ಸೇರಿದಂತೆ ವಿವಿಧ ಘಟನೆಗಳನ್ನು ಉಲ್ಲೇಖಿಸಿ, ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಎತ್ತಿದ ಪ್ರಧಾನಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದರೂ ರಾಜ್ಯದಲ್ಲಿ ‘ಸಿಂಡಿಕೇಟ್ ರಾಜ್’ ಕಾರಣದಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಮಹಿಳೆಯರಿಗಾಗಿ ಹಲವು ಘೋಷಣೆಗಳನ್ನು ಮಾಡಿದ ಪ್ರಧಾನಿ, 75 ಲಕ್ಷ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುವುದು ಹಾಗೂ 20 ಲಕ್ಷ ರೂ.ವರೆಗೆ ಸಾಲ ಪಡೆಯಲು ಸರ್ಕಾರ ಖಾತರಿ ನೀಡುತ್ತದೆ ಎಂದು ಹೇಳಿದರು.
ಕೊನೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ಮರಿಸಿದ ಅವರು, “ಈ ಚುನಾವಣೆ ಜಂಗಲ್ ರಾಜ್, ಭ್ರಷ್ಟಾಚಾರ, ನಿರುದ್ಯೋಗ ಮತ್ತು ಒಳನುಸುಳುವಿಕೆಯನ್ನು ತೊಡೆದುಹಾಕುವ ಅವಕಾಶ” ಎಂದು ಹೇಳಿ ಭಾರತೀಯ ಜನತಾ ಪಕ್ಷ ಪರ ಮತ ಚಲಾಯಿಸಲು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa