ಭಾರತೀಯ ಸೈನಿಕನ ಅನುಮಾನಾಸ್ಪದ ಸಾವು : ತನಿಖೆಗೆ ಸಾರ್ವಜನಿಕರ ಆಗ್ರಹ
ಮದ್ಯಪಾನ
ಸಾವು


ಬಾಗಲಕೋಟೆ, 26 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೀರೆ ಮುಚ್ಚಳಗುಡ್ಡ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಾರುತಿ ಯಮನಪ್ಪ ದಳವಾಯಿ (38) ಅವರ ಸಾವು ಅನುಮಾನಾಸ್ಪದವಾಗಿ ಸಂಭವಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ನಿವಾಸಿಯಾಗಿರುವ ಮಾರುತಿ ದಳವಾಯಿ ಅವರು ರಜೆ ನಿಮಿತ್ತ ತಮ್ಮ ಊರಿಗೆ ಆಗಮಿಸಿದ್ದರು. ಕುಟುಂಬಸ್ಥರ ಹೇಳಿಕೆಯ ಪ್ರಕಾರ, ಅವರು ದಿನನಿತ್ಯ ಹೆಚ್ಚು ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆ ನಡೆದ ದಿನಾಂಕ 25-04-2026 ರಂದು ರಾತ್ರಿ 10 ಗಂಟೆ ಸುಮಾರಿಗೆ ಸಹೋದರರ ಮಧ್ಯೆ ಜಗಳ ನಡೆದಿರುವುದಾಗಿ ತಿಳಿದು ಬಂದಿದೆ.

ಮನೆಯ ಅಕ್ಕಪಕ್ಕದವರ ಅಭಿಪ್ರಾಯದಂತೆ, ಜಗಳದ ಪರಿಣಾಮವಾಗಿ ಅಹಿತಕರ ಘಟನೆ ಸಂಭವಿಸಿ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಕುಟುಂಬದವರು ನೀಡಿರುವ ಮಾಹಿತಿಯ ಪ್ರಕಾರ, ಅತಿ ಹೆಚ್ಚು ಮದ್ಯಪಾನ ಅಮಲಿನಲ್ಲಿ ಬಿದ್ದು ಹೃದಯಾಘಾತದಿಂದ ರಾತ್ರಿ ಸುಮಾರು 2 ಗಂಟೆಗೆ ಮರಣ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಘಟನೆ ಅನುಮಾನಾಸ್ಪದವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತೀವ್ರಗತಿಯಲ್ಲಿ ಸಮಗ್ರ ತನಿಖೆ ನಡೆಸಿ ನಿಜಾಂಶವನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande